ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯನವರ ತವರು ಜಿಲ್ಲೆಗಳಲ್ಲೂ ಮತದಾರರು ಇವಿಎಂ ಬೆಸ್ಟ್ ಎಂದಿದ್ದಾರೆ
ಬೆಂಗಳೂರು : ಕರ್ನಾಟಕದಲ್ಲಿ ಶೇಕಡ 83.61ರಷ್ಟು ಮತದಾರರು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲೆ ವಿಶ್ವಾಸಾರ್ಹತೆ ಹೊಂದಿರುವ ವಿಚಾರ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ವಿಶೇಷವೆಂದರೆ,ಇವಿಎಂ ಬಗ್ಗೆ ಸದಾ ತಕರಾರು ತೆಗೆಯುತ್ತಿರುವ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲೇ ಅತಿಹೆಚ್ಚು ಮತದಾರರು ಇವಿಎಂ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಅಧೀನದಲ್ಲಿ ಕರ್ನಾಟಕ ಮಾನಿಟರಿಂಗ್ ಆ್ಯಂಡ್ ಎವ್ಯಾಲ್ಯೂಯೇಶನ್ ಅಥಾರಿಟಿ ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸಮೀಕ್ಷೆ ನಡೆಸಿದೆ.
ಕರ್ನಾಟಕದಲ್ಲಿ ಒಟ್ಟು ಶೇಕಡ 83.61ರಷ್ಟು ಮತದಾರರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಕಲಬುರಗಿಯಲ್ಲಿ ಶೇಕಡ 94.8ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶೇಕಡ 88.59ರಷ್ಟು ಮತದಾರರು ಇವಿಎಂ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತಯಂತ್ರಗಳ ನಿಖರತೆಯ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. 2025ರ ಆಗಸ್ಟ್‌ನಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗಿತ್ತು ಎಂಬುದು ತಿಳಿದುಬಂದಿದೆ.
ಇವಿಎಂ ಕುರಿತು ನಡೆಸಿದ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆಯೇ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಸಮೀಕ್ಷೆ ನಡೆಸಿದ ಏಜೆನ್ಸಿ ಬಗ್ಗೆ ಪ್ರಸ್ತಾಪ ಮಾಡಿರುವ ಮಾಡಿರುವ ಅವರು, ರಾಜ್ಯ ಸರ್ಕಾರವು ಸಮೀಕ್ಷೆಯನ್ನು ಅನುಮೋದಿಸಿಲ್ಲ. ಮೊದಲನೆಯದಾಗಿ ಅದು ರಾಜ್ಯ ಸರ್ಕಾರ ಮಾಡಿಸಿದ ಸಮೀಕ್ಷೆಯೇ ಅಲ್ಲ. ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಸಮೀಕ್ಷೆಗಾಗಿ ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ನಡೆಸುತ್ತಿರುವ ಎನ್ಜಿಒದ ಸಹಾಯವನ್ನು ಕೋರಲಾಗಿತ್ತು. ನನಗಿರುವ ಮಾಹಿತಿ ತಪ್ಪಲ್ಲವೆಂದಾದರೆ, ಬಾಲಕೃಷ್ಣನ್ ಅವರು ಪ್ರಧಾನ ಮಂತ್ರಿಯವರಿಗಾಗಿ ಬರೆದ ಪುಸ್ತಕದ ಲೇಖಕರಾಗಿದ್ದಾರೆ ಮತ್ತು ಪ್ರಧಾನಮಂತ್ರಿ ಕಚೇರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಾರೆ. ಅಂಥವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ವೋಟ್ ಚೋರಿ ಆರೋಪ ಮಾಡುತ್ತಿರುವ ಮತ್ತು ಸದಾ ಇವಿಎಂ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ನಡೆಸಿದ ಸಮೀಕ್ಷಾ ವರದಿನ್ನು ಮುಂದಿಟ್ಟುಕೊಡು ಬಿಜೆಪಿ ತಿರುಗೇಟು ನೀಡಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಪ್ರತಿಬಾರಿ ರಾಹುಲ್ ಗಾಂಧಿ ಇವಿಎಂ ಅನ್ನು ಹಾಗೂ ಚುನಾವಣಾ ಆಯೋಗವನ್ನು ದೂಷಿಸುತ್ತಾರೆ. ಹಾಗೆ ಮಾಡಿದಾಗಲೆಲ್ಲ ಅವರ ಆರೋಪಗಳು ಸುಳ್ಳೆಂಬುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ.
ಕರ್ನಾಟಕದಲ್ಲಿ ಜನರು ಇವಿಎಂಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ರಾಹುಲ್ ಗಾಂಧಿ ಪ್ರತಿಬಾರಿ ಇವಿಎಂಗಳನ್ನು ಅಥವಾ ವ್ಯವಸ್ಥೆಯನ್ನು ದೂಷಿಸಿದಾಗ ಅವರಿಗೆ ವಾಸ್ತವದ ಅರಿವು ಮೂಡಿಸುವಂಥ ವಿದ್ಯಮಾನಗಳು ನಡೆಯತ್ತವೆ ಎಂದು ಶೆಹಜಾದ್ ಪೂನವಾಲ ಹೇಳಿದ್ದಾರೆ.
























