ಹೊಸ ವರ್ಷದಲ್ಲಿ ವಿದ್ಯುತ್‌ ದರ ಏರಿಕೆ ಶಾಕ್‌

ಯೂನಿಟ್‌ಗೆ 10 ಪೈಸೆಯಂತೆ ಹೆಚ್ಚಿಸಲು ಚಿಂತನೆ

ಬೆಂಗಳೂರು : ಹೊಸ ವರ್ಷದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಿದ್ಯುತ್‌ ದರವನ್ನು ಮತ್ತೆ ಏರಿಸಲು ಆಯೋಗ ತೀರ್ಮಾನಿಸಿದೆ. ವಿದ್ಯುತ್ ಗ್ರಾಹಕರು ವಿದ್ಯುತ್‌ಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದಿರುವ ಆಯೋಗ, ಇದನ್ನು ವಿದ್ಯುತ್ ದರ ಪರಿಷ್ಕರಣೆ ಎಂದು ಕರೆಯದೆ, ಟಾಪ್-ಅಪ್ ಅಥವಾ ಟ್ರೂ-ಅಪ್ ಎಂದು ಸ್ಪಷ್ಟಪಡಿಸಿದೆ.

ಮಾರ್ಚ್ 2025ರಲ್ಲಿ ಕೆಇಆರ್‌ಸಿ ವಿದ್ಯುತ್ ದರ ಪರಿಷ್ಕರಣೆ ಘೋಷಿಸಿದಾಗ, ಮೂರು ವರ್ಷಗಳ ಕಾಲ ಸುಂಕಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿರುವ (ಎಸ್ಕಾಮ್‌ಗಳು) ಬಾಕಿಗಳನ್ನು ಆಧರಿಸಿ ಇದೀಗ ವಾರ್ಷಿಕವಾಗಿ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ಟಾಪ್-ಅಪ್ ಎಂದು ಕರೆಯಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.





















































 
 

ಈ ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ. ಟಾಪ್-ಅಪ್ ಎಲ್ಲ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್‌ಗೆ ಗರಿಷ್ಠ 8–10 ಪೈಸೆ ಮಾತ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೃಷಿ ವಿದ್ಯುತ್ ಸಬ್ಸಿಡಿ ಈಗ ಆರ್ಥಿಕ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) ಅದರ ಮೊತ್ತವನ್ನು ಕಡಿಮೆ ಮಾಡುವಂತೆ ಚಿಂತನೆ ನಡೆಸಿದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಂತೆ ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 8.3 ರೂ.ಇದ್ದ ಕೃಷಿ ಸಬ್ಸಿಡಿಯನ್ನು 7.7ಕ್ಕೆ ಇಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಬದಲಾಗಿ ಈ ವರ್ಷವೂ ವಿದ್ಯುತ್ ದರದಲ್ಲಿ ಏರಿಕೆ ಸಂಭವಿಸಲಿದೆ. ಇದನ್ನು ದರ ಪರಿಷ್ಕರಣೆ ಎಂದು ಕರೆಯದೆ ಟಾಪ್-ಅಪ್ ಎಂದು ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !!
Scroll to Top