ಬೆಳ್ತಂಗಡಿ : ಸಂಚರಿಸುತ್ತಿದ್ದ ಬೈಕ್ ಮೇಲೆ ಕಾಡುಕೋಣ ದಾಳಿ ಮಾಡಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ಸಂಭವಿಸಿದೆ. ಬೈಕ್ ಸವಾರನನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕೂಡೇಲು ನಿವಾಸಿ ವೆಂಕಪ್ಪ ಪೂಜಾರಿಯವರ ಮಗ ಸುಕೇಶ್(31) ಎಂಬವರು ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳ್ತಂಗಡಿಯಿಂದ ಕೆಲಸ ಮುಗಿಸಿ ಡಿ.26ರಂದು ರಾತ್ರಿ ಸುಮಾರು 8.45ಕ್ಕೆ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಲಾಯಿಲ ಗ್ರಾಮದ ಅಲೆಕ್ಕಿ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ ಕಾಡಿನಿಂದ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಸಂಚರಿಸುತ್ತಿದ್ದಾಗ ದಾಳಿ ಮಾಡಿದೆ.
ಕಾಡುಕೋಣ ದಾಳಿ ತೀವ್ರತೆಗೆ ಬೈಕ್ ಸವಾರ ಸುಕೇಶ್ ಅವರ ಕಾಲು ಮತ್ತು ಕೈಗೆ ಸೇರಿದಂತೆ ವಿವಿಧ ದೇಹದ ಭಾಗಗಳಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಪಾಯದಿಂದ ಸುಕೇಶ್ ಪಾರಾಗಿದ್ದಾರೆ. ಕಾಡುಕೋಣ ದಾಳಿಯಿಂದ ಬೈಕ್‌ಗೆ ಹಾನಿಯಾಗಿದೆ.
























