ಮುಸ್ಲಿಮರ ಮನೆ ನೆಲಸಮ ಪ್ರಕರಣ : ಮೂಗು ತೂರಿಸಿ ವಿವಾದ ಮಾಡಿದ ಕೇರಳ

ಕೇರಳದ ಕಾಂಗ್ರೆಸ್‌ ಲಾಬಿಯಿಂದ ಕರ್ನಾಟಕ ಸರ್ಕಾರದ ಮೇಲೆ ಒತ್ತಡ

ಬೆಂಗಳೂರು : ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಮುಸ್ಲಿಂ ಸಮುದಾಯದವರು ಅನಧಿಕೃತವಾಗಿ ನಿರ್ಮಿಸಿದ್ದ ಸುಮಾರು 200 ಮನೆಗಳು ಮತ್ತು ಶೆಡ್‌ಗಳನ್ನು ನೆಲಸಮ ಮಾಡಿದ ಪ್ರಕರಣ ಈಗ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪದಂತಾಗಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಘಟನೆಯಲ್ಲಿ ಅನಗತ್ಯವಾಗಿ ಮೂಗು ತೂರಿಸಿ ಖಂಡಿಸಿದ ಬಳಿಕ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

ಈ ವಿಚಾರದಲ್ಲೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಎಂಟ್ರಿಯಾಗಿದ್ದು, ಕರ್ನಾಟಕದಲ್ಲಿ ಕೇರಳದವರ ಲಾಬಿ ಎಷ್ಟು ಬಲಿಷ್ಠವಾಗಿದೆ ಎನ್ನುವುದನ್ನು ತೋರಿಸುತ್ತದೆ. ಮುಂದಿನ ವರ್ಷ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಸ್ಲಿಮರ ಓಲೈಕೆಗಾಗಿ ಮೂಗುತೂರಿಸಿದೆ ಎಂಬ ಟೀಕೆ ಕೇಳಿಬಂದ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೇಲೆ ಒತ್ತಡ ಹೇರಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.





















































 
 

ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆ, ಶೆಡ್‌ಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಕೆ.ಸಿ ವೇಣುಗೋಪಾಲ್ ಪೋಸ್ಟ್ ಹಂಚಿಕೊಂಡು ತೆರವು ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಚರ್ಚಿಸಿದ್ದೇನೆ. ಮಾನವೀಯತೆ, ಎಚ್ಚರಿಕೆಯಿಂದ, ಸೂಕ್ಷ್ಮತೆಯಿಂದ ಮತ್ತು ಸಹಾನುಭೂತಿಯಿಂದ ಕ್ರಮ ಕೈಗೊಳ್ಳಬೇಕಾಗಿತ್ತು ಎಂಬ ಎಐಸಿಸಿಯ ಗಂಭೀರ ಕಳವಳವನ್ನು ಅವರು ತಿಳಿಸಿದರು. ಸಂತ್ರಸ್ತ ಕುಟುಂಬಗಳೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸುವುದಾಗಿ, ಕುಂದುಕೊರತೆಗಳನ್ನು ಪರಿಹರಿಸುವುದಾಗಿ, ಪುನರ್ವಸತಿ ಮತ್ತು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕೆ.ಸಿ ವೇಣುಗೋಪಾಲ್ ಅವರ ಈ ನಡೆಯಿಂದ ಕಾಂಗ್ರೆಸ್‌ನ ಕರ್ನಾಟಕ ವಿರೋಧಿ ನಡೆಗೆ ಜನಾಕ್ರೋಶ ವ್ಯಕ್ತವಾಗಿದೆ. ಕೇರಳಕ್ಕೆ ಸಂಕಷ್ಟ ಬಂದಾಗೆಲ್ಲ ಕರ್ನಾಟಕ ನೆರವಿನ ಹಸ್ತ ಚಾಚಿದೆ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದಾಗ ಕರ್ನಾಟಕ ಸರ್ಕಾರ 100 ಮನೆಗಳ ನೆರವು ಘೋಷಿಸಿತ್ತು. ವಯನಾಡಿನಲ್ಲಿ ಆನೆ ತುಳಿತಕ್ಕೆ ಅಲ್ಲಿನ ವ್ಯಕ್ತಿ ಬಲಿಯಾದಾಗ ಕರ್ನಾಟಕ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿತ್ತು. ಇದೀಗ ಮುಂಬರುವ ಕೇರಳ ವಿಧಾನಸಭಾ ಚುನಾವಣಾ ಭೀತಿಯಿಂದ ಕಾಂಗ್ರೆಸ್ ಕರ್ನಾಟಕ ವಿರೋಧಿ ನಡೆಗೆ ಮುಂದಾಗಿರುವುದು ಖಂಡನೀಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಇತ್ತೀಚೆಗಷ್ಟೇ ಜಿಬಿಎ ತೆರವು ಕಾರ್ಯಾಚರಣೆ ನಡೆಸಿತ್ತು. ಕೋಗಿಲು ಬಂಡೆ ಬಳಿ 80 ಕೋಟಿ ರೂ. ಮೌಲ್ಯದ ಗೋಮಾಳ ಜಾಗವನ್ನು ಜಿಲ್ಲಾಧಿಕಾರಿ ಬಿಬಿಎಂಪಿಯ ಘನತ್ಯಾಜ್ಯ ವಿಭಾಗಕ್ಕೆ ಕೊಟ್ಟಿದ್ದರು. ಈ ಜಾಗದಲ್ಲಿ ಅನಧಿಕೃತವಾಗಿ ಮುಸ್ಲಿಮರು ವಾಸವಿದ್ದ 200ಕ್ಕೂ ಹೆಚ್ಚು ಮನೆಗಳನ್ನ ಜಿಬಿಎ ತೆರವು ಮಾಡಿತ್ತು. ಈ ವಿಚಾರವಾಗಿ ಸಂತ್ರಸ್ತರು ಕಂದಾಯ ಸಚಿವ ಕೃಷ್ಣಬೈರೇಗೌಡ ನಿವಾಸಕ್ಕೆ ಮುತ್ತಿಗೆ ಯತ್ನವನ್ನೂ ಮಾಡಿದ್ದರು.

ಎಕ್ಸ್ ಖಾತೆಯಲ್ಲಿ ಈ ವಿಚಾರದ ಕುರಿತು ಪೋಸ್ಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, ಉತ್ತರ ಪ್ರದೇಶ ರೀತಿ ಕರ್ನಾಟಕ ಕೂಡ ಬುಲ್ಡೋಜರ್ ನ್ಯಾಯ ಅನುಸರಿಸುತ್ತಿದೆ. ಉತ್ತರ ಭಾರತದಲ್ಲಿ ಹಿಂದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಈಗ ದಕ್ಷಿಣಕ್ಕೂ ಹರಡುತ್ತಿದೆ ಎಂಬುದನ್ನು ಈ ಘಟನೆ ಬಿಂಬಿಸುತ್ತದೆ. ಸಂಘ ಪರಿವಾರದ ಅಲ್ಪಸಂಖ್ಯಾತರ ವಿರೋಧಿ ನೀತಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಅನುಸರಿಸಿದೆ ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ಕೇರಳದ ಸಂಸದ ಎ.ಎ. ರಹೀಂ ಕೋಗಿಲು ಲೇಔಟ್‌ಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ಮಾತನಾಡಿ, ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಿಣರಾಯಿ ವಿಜಯನ್‌ ಟ್ವೀಟ್ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಡಿಸಿಎಂ ಡಿಕೆಶಿಗೆ ಕರೆ ಮಾಡಿ ಏನಿದು ಘಟನೆ ಅಂತ ವರದಿ ಕೇಳಿದ್ದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿ, ವಾಸ ಮಾಡೋಕೆ ಯೋಗ್ಯವಾದ ಸ್ಥಳ ಅದಲ್ಲ. ಮಾನವೀಯತೆ ದೃಷ್ಟಿಯಲ್ಲಿ ಬೇರೆ ಕಡೆ ವ್ಯವಸ್ಥೆ ಮಾಡುತ್ತೇವೆ ಅಂದಿದ್ದರು. ಡಿಕೆ ಶಿವಕುಮಾರ್, ಉತ್ತರ ಕೊಟ್ಟು, ಅದು ವೇಸ್ಟ್ ಡಂಪ್ ಮಾಡಲು ಮೀಸಲಿಟ್ಟ ಜಾಗ. ನಮ್ಮ ನಾಯಕರಿಗೆ, ಕೇರಳದವರಿಗೆ ಮಾಹಿತಿ ಕೊಟ್ಟಿದ್ದೇವೆ. ಪಿಣರಾಯಿ ರಾಜಕೀಯ ಮಾಡುತ್ತಿದ್ದಾರೆ ಅಂದಿದ್ದಾರೆ.

error: Content is protected !!
Scroll to Top