ಪುತ್ತೂರು: ತಾಳಮದ್ದಳೆ ಕಲೆಯನ್ನು ಉಳಿಸುವ ಮತ್ತು ಪಸರಿಸುವಲ್ಲಿ ಪಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ 56 ವರ್ಷಗಳ ಪ್ರಯತ್ನ ಶ್ಲಾಘನೀಯವಾಗಿದೆ. ಸಹ ಸಂಸ್ಥೆಯಾದ ಮಹಿಳಾ ಯಕ್ಷಗಾನ ಸಂಘವು 20 ವರ್ಷಗಳಿಂದ ಕ್ರಿಯಾಶೀಲವಾಗಿ ತಾಳಮದ್ದಳೆಯ ಅಭಿರುಚಿಯನ್ನು ವಿಸ್ತರಿಸಿ ರಾಜ್ಯಾದ್ಯಂತ ಪ್ರದರ್ಶನ ನೀಡಿದ ತಂಡವಾಗಿರುವುದು ಉತ್ತಮ ಬೆಳವಣಿಗೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಜರಗಿದ ಶ್ರೀ ಆಂಜನೇಯ 57 ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಯಕ್ಷಗಾನ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.
ಮಂಗಳೂರು ಅಭಿಮತ ಟಿವಿಯ ಆಡಳಿತ ಪಾಲುದಾರರಾದ ಮಮತಾ ಪಿ ಶೆಟ್ಟಿ, ದೇವಸ್ಥಾನ ಸಮಿತಿಯ ಸದಸ್ಯ ಸುಭಾಷ್ ರೈ ನೆಕ್ಕಿಲಾಡಿ ಶುಭ ಹಾರೈಸಿದರು.
ಪ್ರಶಸ್ತಿ ಪ್ರದಾನ
ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ನೀಡುವ ವಾರ್ಷಿಕ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ -2025’ ಪ್ರಶಸ್ತಿಯನ್ನು ಮದ್ದಳೆಗಾರ ಪಿ.ಟಿ. ಜಯರಾಮ್ ಭಟ್ ಪದ್ಯಾಣ, ಬೆಂಗಳೂರಿನ ಶಾಂತಾ ಮತ್ತು ಜಸ್ಟಿಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ವೇಷಧಾರಿ ಉಮೇಶ ಶೆಟ್ಟಿ ಉಬರಡ್ಕ ಇವರಿಗೆ ಪ್ರದಾನ ಮಾಡಲಾಯಿತು.
ಕಲಾವಿದ ಗಣರಾಜ್ ಕುಂಬ್ಳೆ ಅಭಿನಂದನ ನುಡಿಗಳನ್ನಾಡಿದರು. ಪ್ರಶಸ್ತಿ ಸ್ವೀಕರಿಸಿದ ಉಭಯ ಕಲಾವಿದರು ಎಡನೀರು ಮಠದ ಹಿರಿಯ ಸ್ವಾಮಿಗಳ ಶಿಷ್ಯರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಈ ಪ್ರಶಸ್ತಿ ಅರಸಿ ಬಂದಿರುವುದು ನಮ್ಮ ಸುಯೋಗವೆಂದರು. ಮಹಿಳಾ ಯಕ್ಷಗಾನ ಸಂಘಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಲಾಪೋಷಕಿ ಡಾ. ಮಮತಾ ಪಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ.ರಾವ್ ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀ ಆಂಜನೇಯ ಮಹಿಳಾ ಸಂಘದಿಂದ ವಿಪ್ರಕೂಟ ತಾಳಮದ್ದಳೆ ಹಾಗೂ ಗಣೇಶ್ ಭಟ್ ಹೊಸಮೂಲೆ, ಭವ್ಯಶ್ರೀ ಕುಲ್ಕುಂದ,ಪದ್ಯಾಣ ಶಂಕರನಾರಾಯಣ ಭಟ್, ಪಿ ಟಿ ಜಯರಾಮ ಭಟ್, ಮುರಳಿಧರ ಕಲ್ಲೂರಾಯರ ಹಿಮ್ಮೇಳದಲ್ಲಿ ಶ್ಯಮಂತಕ ಮಣಿ ತಾಳಮದ್ದಳೆ ಜರಗಿತು.
ಅರ್ಥಧಾರಿಗಳಾಗಿ ಜಬ್ಬಾರ್ ಸಮೊ, ಡಾ. ಪ್ರದೀಪ್ ಸಾಮಗ, ರವಿರಾಜ ಪನೆಯಾಲ, ಗಣರಾಜ ಕುಂಬ್ಳೆ ಭಾಗವಹಿಸಿದ್ದರು.
ಸಂಘದ ಗೌರವ ಕಾರ್ಯದರ್ಶಿ, ಟಿ. ರಂಗನಾಥ ರಾವ್ ಬೊಳುವಾರು, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಬೊಳುವಾರು, ಕಾರ್ಯದರ್ಶಿ ಆನಂದ ಸವಣೂರು, ಹರಿಣಾಕ್ಷಿ ಜೆ ಶೆಟ್ಟಿ, ಗುಡ್ಡಪ್ಪ ಬಲ್ಯ, ಶುಭಾ ಜೆ.ಸಿ. ಅಡಿಗ, ಅಚ್ಯುತ ಪಾಂಗಣ್ಣಾಯ, ಗುಂಡ್ಯಡ್ಕ ಈಶ್ವರ ಭಟ್, ಮುರಳಿಧರ ಕಲ್ಲೂರಾಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಖಜಾಂಜಿ ದುಗ್ಗಪ್ಪ ಎನ್. ವಂದಿಸಿದರು.
























