ಮೈಸೂರು ಸ್ಫೋಟ ಪ್ರಕರಣಕ್ಕೆ ಎನ್‌ಐಎ ಎಂಟ್ರಿ

ದಟ್ಟವಾಗುತ್ತಿದೆ ಭಯೋತ್ಪಾದನೆ ಕೃತ್ಯದ ಅನುಮಾನ

ಮೈಸೂರು: ಮೈಸೂರಿನ ಅರಮನೆ ಸಮೀಪ ಸಂಭವಿಸಿದ ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದ್ದು, ಇದೀಗ ತನಿಖೆಗೆ ರಾಷ್ಟ್ರೀಯ ತನಿಖೆ (ಎನ್‌ಐಎ) ದಳ ಎಂಟ್ರಿಯಾಗಿದೆ. ಹೀಗಾಗಿ ಇದು ಭಯೋತ್ಪಾದನಾ ಕೃತ್ಯವಿರಬೇಕೆಂಬ ಅನುಮಾನ ದಟ್ಟವಾಗಿದೆ. ಇಂದು ಮೈಸೂರಿಗೆ ಎನ್‌ಎಐ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆಯಲಿದ್ದಾರೆ.

ಸಾಧಾರಣವಾಗಿ ಹೀಲಿಯಂ ಸ್ಫೋಟವಾಗುವುದಿಲ್ಲ. ಹೀಗಿದ್ದರೂ ಅರಮನೆಯ ಆವರಣದಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿವೆ. ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಬಲೂನ್‌ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರವಾಗಿದೆ.





















































 
 

ಆರಂಭದಲ್ಲಿ ಮೃತ ಸಲೀಂ ಕೋಲ್ಕತ್ತಾದ ಮೂಲದವನು ಎನ್ನಲಾಗಿತ್ತು. ಆದರೆ ಈಗ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದಿಂದ ಸಹೋದರರ ಜೊತೆ ಮೈಸೂರಿಗೆ ಆಗಮಿಸಿದ ಈತ ಕಳೆದ 15 ದಿನಗಳಿಂದ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದ.

ಇಲ್ಲಿ ಹೀಲಿಯಂಗೆ ಬೇರೆ ಗ್ಯಾಸ್‌ ಮಿಶ್ರಣ ಮಾಡಿರುವ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆ ಸಲೀಂ ಮೈಸೂರಿಗೆ ಬಂದಿದ್ದಾನೆ. ಬಂದವನಿಗೆ ಅಷ್ಟು ಸುಲಭವಾಗಿ ಹೀಲಿಯಂ ಸಿಲಿಂಡರ್‌ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.

ಸೈಕಲ್‌ನಲ್ಲಿ ಹೀಲಿಯಂ ಬಲೂನ್ ಮಾರುತ್ತಿದ್ದಾಗ ರಾತ್ರಿ 8.30ರ ವೇಳೆಗೆ ಸಿಲಿಂಡರ್ ಸ್ಫೋಟವಾಗಿದೆ. ಪ್ರತ್ಯಕ್ಷದರ್ಶಿ ಅರಮನೆಯ ಗೈಡ್‌ ನೀಡಿದ ಮಾಹಿತಿ ಪ್ರಕಾರ ಬಲೂನ್ ಮಾರಾಟಗಾರ ಅರಮನೆ ಮುಂಭಾಗದಲ್ಲಿ ನಿಂತು ಯಾವತ್ತೂ ಬಲೂನ್ ಮಾರುತ್ತಿರಲಿಲ್ಲ. ಆತ ಬಂದ ಕೂಡಲೇ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗುರುವಾರ (ಡಿ.25) ಈ ಜಾಗದಲ್ಲಿ ನಿಂತು ಬಲೂನು ಮಾರಾಟ ಮಾಡಿರಲಿಲ್ಲ. ಹಾಗಾದರೆ ಅರಮನೆ ಮುಂಭಾಗವೇ ಸಿಲಿಂಡರ್ ಸ್ಫೋಟ ಯಾಕಾಯ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸಿಲಿಂಡರ್ ಸ್ಫೋಟ ಆಕಸ್ಮಿಕವೇ? ಅಥವಾ ಉದ್ದೇಶಪೂರ್ವಕವೇ? ಯಾವತ್ತೂ ಅರಮನೆ ಮುಂಭಾಗದಲ್ಲಿ ಕಾಣಿಸಿಕೊಳ್ಳದವನು ರಾತ್ರಿ ಇಲ್ಲಿಗೆ ಬಂದಿದ್ದು ಯಾಕೆ? ಏಕಾಏಕಿ ಅರಮನೆ ಮುಂಭಾಗವೇ ಸಿಲಿಂಡರ್ ಸ್ಫೋಟ ಯಾಕಾಯಿತು ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

ಅರಮನೆ ಬಳಿ ವಸ್ತುಗಳನ್ನು ಮಾರಾಟ ಮಾಡುವವರು ಸಾಮಾನ್ಯವಾಗಿ ಮೈಸೂರಿನ ಅಸುಪಾಸಿನ ಜನರೇ ಆಗಿರುತ್ತಾರೆ. ಈಗ ಬಲೂನ್ ಮಾರುತ್ತಿದ್ದ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ಈಗ ತನಿಖೆ ಶುರುವಾಗಿದೆ. ಉತ್ತರ ಪ್ರದೇಶ ಮೂಲದ ಸಲೀಂ ಮೈಸೂರಿಗೆ ಬಂದಿದ್ದು ಯಾವಾಗ? ಎಷ್ಟು ವರ್ಷದಿಂದ ಬಲೂನ್ ಮಾರುತ್ತಿದ್ದ? ಅರಮನೆ ಮುಂಭಾಗವೇ ಸಲೀಂ ನಿರಂತರವಾಗಿ ಬಲೂನ್ ಮಾರುತ್ತಿದ್ದನೇ ಅಥವಾ ನಿನ್ನೆ ಮೊದಲು ಬಂದಿದ್ದ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಹೀಲಿಯಂ ಜಡ ಅನಿಲವಾಗಿದ್ದು ಆಮ್ಲಜನಕ ಅಥವಾ ಇತರ ಅಂಶಗಳೊಂದಿಗೆ ಪ್ರತಿಕ್ರಿಯಿಸದ ಕಾರಣ ಅದು ಸ್ಫೋಟವಾಗುವುದಿಲ್ಲ. ಇದು ಸಂಪೂರ್ಣವಾಗಿ ದಹಿಸಲಾಗದ ಮತ್ತು ಹೆಚ್ಚು ದಹಿಸಬಲ್ಲ ಹೈಡ್ರೋಜನ್‌ ಬಲೂನ್‌ಗಳಿಗೆ ಹೆಚ್ಚು ಸುರಕ್ಷಿತವಾಗಿದೆ. ಈ ಕಾರಣಕ್ಕೆ ಜಾತ್ರೆಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಹೀಲಿಯಂ ತುಂಬಿಸಿದ ಬಲೂನ್‌ಗಳನ್ನು ಮಾರಾಟ ಮಾಡಲಾಗುತ್ತದೆ.

ಹೀಲಿಯಂ ರಾಸಾಯನಿಕವಾಗಿ ಸ್ಥಿರವಾಗಿರುತ್ತದೆ ಮತ್ತು ಸುಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಹೈಡ್ರೋಜನ್ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿದಾಗ ಸ್ಫೋಟ ಆಗುತ್ತದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಹೀಲಿಯಂ ಬಳಕೆ ಮಾಡಲಾಗುತ್ತದೆ.

error: Content is protected !!
Scroll to Top