ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ಹೇಳಿದ ಕಾರಣಕ್ಕೆ ಯುವತಿಯ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿ ಆರೋಪಿ ಪರಾರಿಯಾದ ಘಟನೆ ಸಾಣೆಗುರುವನಹಳ್ಳಿಯಲ್ಲಿ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಗೀತಾ (40) ಎಂದು ಗುರುತಿಸಲಾಗಿದೆ. ಆರೋಪಿ ಮುತ್ತು ತಲೆಮರೆಸಿಕೊಂಡಿದ್ದಾನೆ.
ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಗೀತಾ ಅವರು ಸಾಣೆಗುರುವನಹಳ್ಳಿಯಲ್ಲಿ ವಾಸವಿದ್ದು, ಅಲ್ಲೇ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡಿದ್ದರು. ಮುತ್ತು ಟೀ ಸ್ಟಾಲ್ ಇಟ್ಟುಕೊಂಡಿದ್ದ. ಮುತ್ತುವಿಗೆ ತಮ್ಮ ಮಗಳನ್ನು ಮದುವೆ ಮಾಡಿ ಕೊಡಲು ಗೀತಾ ಮತ್ತು ಆತನ ಮನೆಯವರು ಮಾತುಕತೆ ನಡೆಸಿದ್ದರು. ಆ ಬಳಿಕ ಆತ ಗೀತಾ ಮನೆಯಲ್ಲೇ ವಾಸವಿದ್ದು ಈ ಸಂದರ್ಭದಲ್ಲಿ ಆತ ಮದ್ಯವ್ಯಸನಿ ಎಂಬುದು ಗೊತ್ತಾಗಿದೆ. ಹಾಗಾಗಿ ಈ ಮದುವೆಯನ್ನು ಗೀತಾ ನೀರಾಕರಿಸಿದ್ದರು.
ಇದರಿಂದ ಕುಪಿತನಾದ ಆರೋಪಿ ಗೀತಾ ಅವರು ನಿದ್ರಿಸುತ್ತಿದ್ದ ಸಮಯದಲ್ಲಿ ಅವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಗೀತಾ ಅವರನ್ನು ಸ್ಥಳೀಯರ ನೆರವಿನ ಜೊತೆಗೆ ಪುತ್ರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























