ಮಠಕ್ಕೆ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಸ್ವಾಮೀಜಿ
ಬೆಳಗಾವಿ: ಮಠಕ್ಕೆ ಬಂದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಸ್ವಾಮೀಜಿ ತನ್ನ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣ ಸಾಬೀತಾಗಿದ್ದು, ಅಪರಾಧಿಪಿಗೆ 35 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಮಂದಿರ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಮೇ 13ರಂದು ಮಠಕ್ಕೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ನಂತರ ರಾಯಚೂರು, ಬಾಗಲಕೋಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸುತ್ತಾಡಿಸಿ ಅತ್ಯಾಚಾರ ಎಸಗಿ ಕೊನೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ.
ಈ ಕುರಿತು ಯುವತಿಯ ಕುಟುಂಬದವರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿ ಮೇ 24ರಂದು ಅತ್ಯಾಚಾರ ಆರೋಪಿ ಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.
























