ದಂಪತಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಪುತ್ತೂರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೊಂಬೆಟ್ಟು ನಿವಾಸಿ ಎ. ವಿ. ನಾರಾಯಣ ಅವರ ಮನೆಗೆ ನಿನ್ನೆ ರಾತ್ರಿ ಹೆಲ್ಮೆಟ್ ತೊಟ್ಟ ಕಳ್ಳರು ನುಗ್ಗಿದ್ದು, ದಂಪತಿಯ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ.
ಮನೆಯ ಹಿತ್ತಲ ಬಾಗಿಲು ತೆರೆದಿದ್ದು, ಆ ಬಾಗಿಲಿನ ಮೂಲಕ ಇಬ್ಬರು ಖದೀಮರು ಮನೆಯೊಳಕ್ಕೆ ಪ್ರವೇಶಿಸಿ ನಾರಾಯಣ ಅವರ ಪತ್ನಿ ನಿವೃತ್ತ ಪ್ರಾದ್ಯಾಪಕಿ ವತ್ಸಲಾ ರಾಜ್ನಿ ಅವರ ಬಾಯಿ, ಕಣ್ಣುಗಳನ್ನು ಒತ್ತಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಕುರ್ಚಿಯಿಂದ ಕೆಳಕ್ಕೆ ಬಿದ್ದ ಅವರು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಅದೇ ಸಂದರ್ಭದಲ್ಲಿ ನಾರಾಯಣ ಅವರ ಮೇಲೆ ಮತ್ತೊಬ್ಬ ದಾಳಿ ನಡೆಸಲು ಮುಂದಾಗಿದ್ದು ಅವರು ಸಹ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ.
ದಂಪತಿಯ ಈ ಪ್ರತಿಭಟನೆಯಿಂದ ಕಂಗಾಲಾದ ದರೋಡೆಕೋರರು ತಕ್ಷಣವೇ ಹಿಂಬಾಗಿಲಿನ ಮೂಲಕವೇ ಓಡಿ ತಪ್ಪಿಸಿಕೊಂಡಿದ್ದಾರೆ.
ವತ್ಸಲಾ ಅವರ ತುಟಿಗೆ ಗಾಯವಾಗಿದ್ದು, ಮನೆಯಿಂದ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ನಾರಾಯಣ ಅವರು ತಮ್ಮ ಅಣ್ಣನ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























