ರಾತ್ರಿ 9.45ರ ತನಕ ಕಾದರೂ ಕರಗದ ಮಂಜಿನೀಂದಾಗಿ ರದ್ದಾದ ಪಂದ್ಯ
ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ನಾಲ್ಕನೇ ಪಂದ್ಯ ಒಂದೇ ಒಂದು ಎಸೆತ ಕಾಣದೆ ರದ್ದಾಗಿದೆ. ಲಖನೌ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ದಟ್ಟ ಮಂಜು ಮೈದಾನದ ತುಂಬಾ ಹರಡಿದ್ದರಿಂದ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಪಂದ್ಯ ಟಾಸ್ ಕೂಡ ನಡೆಯದೆ ರದ್ದಾಗಿದೆ.
ವಾಸ್ತವವಾಗಿ ಪೂರ್ವನಿಗದಿಯಂತೆ ಈ ನಾಲ್ಕನೇ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 6.30 ಕ್ಕೆ ನಡೆಯಬೇಕಿತ್ತು. ಆ ಬಳಿಕ ಸಂಜೆ 7 ಗಂಟೆಗೆ ಆಟ ಆರಂಭವಾಗಬೇಕಿತ್ತು. ಆದರೆ ರಾತ್ರಿ 9.30 ರವರೆಗೂ ಕಾದರೂ ಮಂಜು ಕಡಿಮೆಯಾಗದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯವನ್ನು ಗೆದ್ದರೆ ಸರಣಿ ಭಾರತದ ಕೈವಶವಾಗುತ್ತಿತ್ತು. ಆದರೆ ಹವಾಮಾನ ಆಟದಿಂದಾಗಿ ಕ್ರಿಕೆಟ್ ಆಟ ನಡೆಯದೆ ಟೀಂ ಇಂಡಿಯಾದ ಜೊತೆಗೆ ಕ್ರಿಕೆಟ್ ಅಭಿಮಾನಿಗಳು ಕೂಡ ನಿರಾಶೆ ಅನುಭವಿಸಿದ್ದಾರೆ.
ಮೈದಾನದಲ್ಲಿ ಮಂಜು ಆವರಿಸಿದರಿಂದ ಟಾಸ್ ನಡೆಯಲು ಅವಕಾಶ ನೀಡಲಿಲ್ಲ. ಪಂದ್ಯದ ಅಧಿಕಾರಿಗಳು ಬರೋಬ್ಬರಿ 6 ಬಾರಿ ಟಾಸ್ ಮುಂದೂಡಿದರು. ಆದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಮಂಜಿನ ಕಾರಣ ಪಂದ್ಯದ ಅಧಿಕಾರಿಗಳು ಮೊದಲ ತಪಾಸಣೆಯನ್ನು ಸಂಜೆ 6.50ಕ್ಕೆ ನಿಗದಿಪಡಿಸಿದರು. ಪರಿಸ್ಥಿತಿ ಹದಗೆಟ್ಟಂತೆ, ತಪಾಸಣೆ ಸಮಯವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ನಂತರದ ತಪಾಸಣೆಗಳನ್ನು ಸಂಜೆ 7.30 ಕ್ಕೆ, ನಂತರ ರಾತ್ರಿ 8 , ರಾತ್ರಿ 8.30, ರಾತ್ರಿ 9ಕ್ಕೆ ಮತ್ತು ಅಂತಿಮವಾಗಿ, ಅಂತಿಮ ತಪಾಸಣೆಯನ್ನು ರಾತ್ರಿ 9.25ಕ್ಕೆ ನಡೆಸಲಾಯಿತು.
ಐಸಿಸಿ ನಿಯಮಗಳ ಪ್ರಕಾರ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯವನ್ನು ತಲಾ ಐದು ಓವರ್ಗಳಾದರೂ ಆಡಿಸಬೇಕಾದರೆ ಪಂದ್ಯ ರಾತ್ರಿ 9.46ರೊಳಗೆ ಆರಂಭವಾಗಬೇಕಿತ್ತು. ಆದರೆ ರಾತ್ರಿ 9.25ಕ್ಕೆ ಅಂಪೈರ್ಗಳು ಪರಿಶೀಲಿಸಿದಾಗ ಮೈದಾನ ಆಟಕ್ಕೆ ಸೂಕ್ತವಾಗಿರದ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
4ನೇ ಟಿ20 ಪಂದ್ಯ ರದ್ದಾಗಿರುವುದರಿಂದ ಭಾರತ ತಂಡ ಸರಣಿ ಸೋಲುವ ಆತಂಕದಿಂದ ಹೊರಬಂದಿದೆ. ಈ ಸರಣಿಯಲ್ಲಿ ಈಗಾಗಲೇ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ಸೂರ್ಯ ಪಡೆ, ಕೊನೆಯ ಪಂದ್ಯವನ್ನು ಗೆದ್ದರೆ, ಸರಣಿ 3-1 ಅಂತರದಿಂದ ಭಾರತದ ಪಾಲಾಗಲಿದೆ. ಒಂದು ವೇಳೆ ಸೋತರೆ ಸರಣಿ 2-2 ರಿಂದ ಅಂತ್ಯವಾಗಲಿದೆ. ಈ ಮೂಲಕ ಭಾರತ ಸತತ 11 ಸರಣಿಗಳ ಅಜೇಯ ಓಟವನ್ನು ಭಾರತ ಮುಂದುವರಿಸಲಿದೆ.
























