ಮೆಲ್ಕಾರ್: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ರಿ. ಬಂಟ್ವಾಳ ನೇತೃತ್ವದಲ್ಲಿ, ಪುತ್ತೂರು ಘಟಕದ ಸಹಯೋಗದೊಂದಿಗೆ ಒಂದು ದಿನದ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಪ್ರಾರಂಭಗೊಂಡು ಶ್ರೀ ಕ್ಷೇತ್ರ ಪಾವಂಜೆ, ಸಿಗಂದೂರು, ಕೊಲ್ಲೂರು ಮತ್ತು ಕಾಪು ಮಾರಿಯಮ್ಮ ದೇವಸ್ಥಾನಗಳನ್ನು ಸಂದರ್ಶಿಸಲಾಯಿತು.
ಕೊಲ್ಲೂರು ದೇವಳದ ಪ್ರಧಾನ ಅರ್ಚಕ ನರಸಿಂಹ ಅಡಿಗರ ಸಮಕ್ಷಮದಲ್ಲಿ ಪ್ರತಿಷ್ಠಾನದ ಮಾಸಿಕ ಸಭೆ ನಡೆಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಪ್ರತಿವರ್ಷ ನಡೆಯುವ ಕ್ಷೇತ್ರ ಭೇಟಿಯಂತೆ ಈ ಬಾರಿಯೂ ಕ್ಷೇತ್ರ ಸಂದರ್ಶನ ಮಾಡಿ ಹಿರಿಯ ಬಂಧುಗಳು ಜೀವನದಲ್ಲಿ ಹೊಸ ಚೈತನ್ಯವನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು. ಡಿ. 20ರಂದು ಪೂರ್ವಾಹ್ನ ಶ್ರೀ ಕ್ಷೇತ್ರ ಪಾವಂಜೆಯಲ್ಲಿ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಜರಗಲಿದ್ದು ಕಾವ್ಯವಾಚನ, ಧಾರ್ಮಿಕ ಉಪನ್ಯಾಸ ಮತ್ತು ತಾಲೂಕು ಘಟಕಗಳ ವತಿಯಿಂದ ಸೇವಾ ಕಾರ್ಯಗಳ ಸಮರ್ಪಣೆ ನಡೆಯಲಿದ್ದು ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಪ್ರಧಾನ ಅರ್ಚಕ ನರಸಿಂಹ ಅಡಿಗರು ಆಶೀರ್ವಚನ ನೀಡಿ ಶ್ರೀ ಮೂಕಾಂಬಿಕಾ ದೇವಿಯ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹರಸಿ ಪ್ರಸಾದ ವಿತರಿಸಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ. ವಿ. ನಾರಾಯಣ, ಉಪಾಧ್ಯಕ್ಷ ದುಗ್ಗಪ್ಪ ಎನ್., ಖಜಾಂಜಿ ಅನಾರು ಕೃಷ್ಣಶರ್ಮ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ, ಜಯಾನಂದ ಪೆರಾಜೆ, ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿದ್ದರು.
ಮಂಗಳೂರಿನ ಶ್ರೀ ಮಂಗಳಾದೇವಿ ಘಟಕ, ಪುತ್ತೂರು ಬೆಳ್ತಂಗಡಿ ಮತ್ತು ಬಂಟ್ವಾಳ ಘಟಕದ 41 ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
























