ಶಬರಿಮಲೆ ಯಾತ್ರೆ ಮುಗಿಸಿ ಬಂದ ಖುಷಿಯಲ್ಲಿ ಎಣೆಣೆ ಪಾರ್ಟಿ ಮಾಡುತ್ತಿದ್ದ ಗೆಳೆಯರು
ಉಡುಪಿ : ಸ್ನೇಹಿತರ ನಡುವೆ ಗುಂಡಿನ ಪಾರ್ಟಿಯಲ್ಲಿ ಶುರುವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಉಡುಪಿಯ ಬ್ರಹ್ಮಾವರ ಸಮೀಪ ನಡೆದಿದೆ. ನಾಲ್ವರು ಗೆಳೆಯರು ಸೇರಿ ತಮ್ಮ ಓರ್ರವ ಗೆಳೆಯನನ್ನು ಕೊಲೆ ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಬರಿಮಲೆ ಯಾತ್ರೆ ಮುಗಿಸಿಬಂದ ಖುಷಿಯಲ್ಲಿ ಮರುದಿನವೇ ಸ್ನೇಹಿತರು ಗುಂಡು ಹಾಕಲು ಕುಳಿತಿದ್ದರು ಎನ್ನಲಾಗಿದೆ.
ಉಡುಪಿಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆಯಲ್ಲಿ ಘಟನೆ ನಡೆದಿದ್ದು, ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ್ ಪೂಜಾರಿ (30) ಕೊಲೆಯಾದ ಯುವಕ. ಶಬರಿಮಲೆ ಯಾತ್ರೆ ಮುಗಿಸಿ ಮಾಲೆ ತೆಗೆದ ಮರುದಿನ ಸ್ನೇಹಿತರು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದು, ಇನ್ನೇನು ಎಣ್ಣೆ ಹೊಡೆಯುವುದು ಮುಗಿದು ಬಿರಿಯಾನಿ ಸೇವಿಸಬೇಕೆನ್ನುವಷ್ಟರಲ್ಲಿ ಸಂತೋಷನ ಹೆಣ ಬಿದ್ದಿದೆ. ಪಾರ್ಟಿಯಲ್ಲಿ ಕ್ಷುಲ್ಲಕ ಕಾರಣ ಶುರುವಾದ ಗಲಾಟೆ ಸ್ನೇಹಿತ ಕೊಲೆಯಲ್ಲಿ ಅಂತ್ಯವಾಗಿದೆ.
ಶಬರಿಮಲೆ ಯಾತ್ರೆಗೆ ತೆರಳಿ ಮರಳಿ ಬಂದ ಖುಷಿಗೆ ಡಿ.14ರ ಸಂಜೆ ಒಂದಾಗಿ ಸೇರಿ ಬಾರ್‌ನಲ್ಲಿ ಪಾರ್ಟಿ ಮುಗಿಸಿ ಸಂತೋಷದಲ್ಲಿ ತಮ್ಮ ಮಾಮೂಲಿ ಸೇರುವ ಜಾಗಕ್ಕೆ ಹೋಗಿದ್ದರು. ಹೋಗುವಾಗ ಒಟ್ಟಿಗೆ ಊಟ ಮಾಡುವ ಉದ್ದೇಶದಿಂದ ಬಿರಿಯಾನಿ ಪಾರ್ಸೆಲ್ ತಂದು ಊಟಕ್ಕೆ ಕುಳಿತವರ ನಡುವೆ ಸಣ್ಣ ಮನಸ್ತಾಪ ಉಂಟಾಗಿದೆ. ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಹಾಗೂ ದರ್ಶನ್ ಒಟ್ಟಿಗೆ ಊಟ ಮಾಡುವಾಗ ಸಂತೋಷ್ ಅವರ ಕುಟುಂಬ ವಿಚಾರ ಹಾಗೂ ಕುಡಿತದ ವಿಷಯದಲ್ಲಿ ದರ್ಶನ್, ಕೌಶಿಕ್, ಅಂಕಿತ್ ಹಾಗೂ ಸುಜನ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಜಗಳದ ವೇಳೆ ಅವಾಚ್ಯ ಪದ ಬಳಸಿ ಜಗಳ ತಾರಕಕ್ಕೇರಿದ್ದು, ನಾಲ್ವರು ಸೇರಿ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ.
ದರ್ಶನ್ ಸಂತೋಷ್ ಅವರ ಕುತ್ತಿಗೆಯ ಹಿಂಭಾಗಕ್ಕೆ ಕೈಯಿಂದ ಬಲವಾಗಿ ಹೊಡೆದಿದ್ದು, ಕೌಶಿಕ್ ಕೂಡ ಕೈಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ರಜತ್ ಎನ್ನುವವರು ಮಧ್ಯಪ್ರವೇಶಿಸಿ ಜಗಳ ತಡೆಯಲು ಯತ್ನಿಸಿದರೂ, ಹಲ್ಲೆಯಿಂದ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಸಂತೋಷ್ ಕುಸಿದು ಬಿದ್ದ ತಕ್ಷಣ ಗಾಬರಿಯಾದ ಉಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತೋಷ್ ಅವರ ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡದ ಸ್ಥಿತಿಯಲ್ಲಿ ಇದ್ದ ಹಿನ್ನೆಲೆಯಲ್ಲಿ ಜಗಳ ಬಿಡಿಸಲು ಯತ್ನಿಸಿದ ರಜತ್, ಸಚಿನ್, ಚೇತನ್ ಹಾಗೂ ಪ್ರಕಾಶ್ ಸಹಾಯದಿಂದ ಕಾರಿನಲ್ಲಿ ಬ್ರಹ್ಮಾವರದ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ, ಸಂತೋಷ್ ಈಗಾಗಲೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ರಜತ್ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು, ದರ್ಶನ್ (21), ಕೌಶಿಕ್ (21), ಅಂಕಿತ (19), ಸುಜನ್ (21) ಎನ್ನುವರನ್ನು ಬಂಧಿಸಿದ್ದಾರೆ. ಮೃತ ಸಂತೋಷ್ ಮೊದಲೇ ಹೃದಯ ರೋಗದಿಂದ ಬಳಲುತ್ತಿದ್ದು, ಇತ್ತೀಚಿಗಷ್ಟೇ ಸ್ಟಂಟ್ ಹಾಕಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
























