ಕಾಣಿಯೂರು: ಸರ್ಕಾರಿ ಶಾಲೆ ಪ್ರತಿಭಾನ್ವಿತ ಶಿಕ್ಷಕರುಗಳನ್ನು ಒಳಗೊಂಡಿದ್ದು, ಉತ್ತಮ ಬೋಧನೆ ಮಾಡುತ್ತಿರುವುದರಿಂದಲೇ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಶಾಲೆಗಳ ಜೊತೆಗೆ ಊರಿನ ಸಮುದಾಯದವರ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಯಶಸ್ವಿನೊಂದಿಗೆ ಶಾಲೆಯ ಅಭಿವೃದ್ಧಿಯೂ ಸಾಧ್ಯ. ಎಸ್ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರು ತಂಡವಾಗಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಶಿಕ್ಷಣ ಸಂಸ್ಥೆ ಉನ್ನತ ಎಂಬುದಕ್ಕೆ ಕುದ್ಮಾರು ಶಾಲೆಯೇ ಸಾಕ್ಷಿ ಎಂದು ಪುತ್ತೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ. ಹೇಳಿದರು.
ಕುದ್ಮಾರು ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಸಾಧ್ಯ. ಉತ್ತಮ ಶಿಕ್ಷಣವನ್ನು ಪಡೆದು ಸಾಧನೆಗಳ ಮೂಲಕ ದೇಶದ ಭವಿಷ್ಯವನ್ನು ನಿರ್ಧರಿಸುವ ಕಾರ್ಯ ಮಕ್ಕಳಿಂದಾಗಬೇಕು. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು. ದಿಟ್ಟವಾದ ಗುರಿ ನಮ್ಮ ಮುಂದೆ ಇರಬೇಕು. ಗುಣಮಟ್ಟದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ತುಂಬುವಂತಹ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಮಾತನಾಡಿ, ಊರಿನ ಎಲ್ಲರ ಮನಸ್ಸು ಒಂದದಾಗ ಮಾತ್ರ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿದೆ ಎಂಬುದಕ್ಕೆ ಕುದ್ಮಾರು ಶಾಲಾ ವಾಷಿಕೋತ್ಸವವೇ ಸಾಕ್ಷಿ. ಮಕ್ಕಳನ್ನು ಕಲಿಕೆಗೆ ಮಾತ್ರ ಸೀಮಿತಗೊಳಿಸದೇ ಇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು.

ಪಿಪಿಎಲ್ ಜಂಟಿ ಜನರಲ್ ಮ್ಯಾನೇಜರ್ ಕೀರ್ತನ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ. ಮಗುವಿಗೆ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕೊಟ್ಟಾಗ ಮಾತ್ರ ಆ ಮಗುವಿನ ಕನಸು ನನಸಾಗಲು ಸಾಧ್ಯ. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು ವಿದ್ಯಾರ್ಥಿಗಳು ಕಲಿಕೆಯ ಜತೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು, ಅಜ್ಞಾನ ಕೂಡಿದ ಪ್ರಪಂಚವನ್ನು ಜ್ಞಾನದ ಬೆಳಕಿನಲ್ಲಿ ಕೊಂಡೊಯ್ಯುವ ಗುರುಗಳ ಕಾರ್ಯ ಗೌರವಿಸುವಂತಹದ್ದು, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು. ಒಳ್ಳೆಯ ಚಿಂತನೆ, ಒಳ್ಳೆಯ ಸಂಸ್ಕೃತಿ ಮುಂದಿನ ಜೀವನಕ್ಕೆ ಬುನಾದಿ ಎಂದರು.
ಬೆಳ್ಳಾರೆ ಪೊಲೀಸ್ ಠಾಣೆಯ ಉಪನೀರಿಕ್ಷಕ ಈರಯ್ಯ ಡಿ.ಎನ್. ಮಾತನಾಡಿ, ಮಕ್ಕಳ ಜೀವನವು ಸುಂದರವಾಗುವಲ್ಲಿ ನಮ್ಮೂರಿನ ಸರ್ಕಾರಿ ಶಾಲೆಯ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭೆಯನ್ನು ಗುರುಗಳ ಸಹಾಯದಿಂದ ಬೆಳೆಸಿಕೊಂಡು, ವಿವಿಧ ಹಂತಗಳಲ್ಲಿ ಸಮರ್ಪಕವಾಗಿ ಬಳಸಿಕೊಂಡಾಗ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಕಂಗೊಳಿಸಲು ಸಾಧ್ಯ. ವಿದ್ಯಾಭಿಮಾನಿಗಳು ಒಗ್ಗೂಡಿ ಕೆಲಸ ಮಾಡಿದರೆ ಶಿಕ್ಷಣ ಸಂಸ್ಥೆಗಳ ಪ್ರಗತಿ ಸಾಧ್ಯ. ಜೀವನದಲ್ಲಿ ಪ್ರಾಮುಖ್ಯತೆವಾದುದು ವಿದ್ಯೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗಿದ್ದಾರೆ. ಸರ್ಕಾರಿ ಕೆಲಸಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕುದ್ದಾರು ಸ.ಉ.ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿ ಮಾತನಾಡಿ, ಕುದ್ಮಾರಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಯಶಸ್ವಿಯಾಗಲು ಊರಿನ ಎಲ್ಲರ ಕೂಡುವಿಕೆಯಿಂದ ಸಾಧ್ಯವಾಗಿದೆ. ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಹೆತ್ತವರ ಕರ್ತವ್ಯ. ಮಕ್ಕಳ ಕಲಿಕೆಯ ಜೊತೆಯಲ್ಲಿ ಅವರಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಲು ಇಂತಹ ಕಾರ್ಯಕ್ರಮ ಸಹಕಾರಿ ಎಂದರು. ಹಾಗೆಯೇ ಸುಮಾರು 20 ವರ್ಷಗಳ ಕಾಲ ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿರುವ ಸಂದರ್ಭದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಶಾಲೆಯ ಅಭಿವೃದ್ಧಿಗೆ ಮುಂದೆಯೂ ಸಹಕಾರ ನೀಡುತ್ತೇನೆ ಎಂದರು.
ಕುದ್ಮಾರು ಸ.ಉ.ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕುಶಾಲಪ್ಪ ಬಿ., ಸವಣೂರು ಕ್ಲಸ್ಟರ್ ಸಿಆರ್ಪಿ ಜಯಂತ ವೈ, ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಿಂಗರಾಜು, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ವಿದ್ಯಾರ್ಥಿ ನಾಯಕಿ ಫಾತಿಮತ್ ಕೈಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿವ್ಯ ಕೆರೆನಾರು, ಯೋಗೀಶ್ ಕುದ್ದಾರು, ಸದಾನಂದ ಸೌತಮಾರು, ಆನಂದ ಸೌತೆಮಾರು, ದಾಮೋದರ ನಾಕಿರಣ, ಬಾಲಚಂದ್ರ ನೂಜಿ, ಯಶೋಧರ ಕೆಡೆಂಜಿಕಟ್ಟ, ರಮ್ಯಾ ಪಟ್ಟೆ, ಜಯಂತ ನೂಜಿ, ಬಶೀರ್, ತೀರ್ಥ ಪ್ರಸಾದ್ ಕುದ್ಗಾರು, ರಂಜಿತ್ ಮುದ್ದ, ಉಮೇಶ್ ಕೆರೆನಾರು, ಮಲ್ಲಾರ, ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ದೇವರಾಜ್ ನೂಜಿ, ಶಾಲಾ ಅಂಚನ್ ಡೆಬೈಲಿ, ಪುಷ್ಪಾಲತಾ ಕುದ್ದಾರು, ಚೇತನ್ ಹೊಸೊಕ್ಕು, ಚಿದಾನಂದ ಕರೆನಾರು, ಪೂರ್ಣಿಮಾ ಕೊಂಕ್ಯ ಅತಿಥಿಗಳನ್ನು ಗೌರವಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಕಡೆಂಜಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಿವರ ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಿನಿ ವರ್ಗೀಸ್ ಶಾಲಾ ವರದಿ ವಾಚಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಮೇದಪ್ಪ ಗೌಡ ಕುವೆತ್ತೋಡಿ ಸಂಘದ ವರದಿ ವಾಚಿಸಿದರು. ಕುದ್ದಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಬರೆಪ್ಪಾಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಯಶೋಧರ ಕಡೆಂಜಿಕಟ್ಟಿ ವಂದಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಲತಾ, ವೀಣಾರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಕುಮಾರ್ ಸೊರಕೆ, ಉದ್ಯಮಿ ಪಿ.ವಾಮನ್ ಪೈ ಪುತ್ತೂರು, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿ ಮೇದಪ್ಪಗೌಡ ಕುವೆತ್ತೋಡಿ, ಶಾಲಾ ಎಸ್ ಡಿಎಂಸಿ ಮಾಜಿ ಅಧ್ಯಕ್ಷೆನವ್ಯಾ ಅನ್ಯಾಡಿ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿಜಯಕುಮಾರ್ ಸೊರಕೆ, ಉದ್ಯಮಿ ಪಿ.ವಾಮನ್ ಪೈ ಪುತ್ತೂರು, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಶುಭಹಾರೈಸಿದರು. ಶಾಲಾ ಎಸ್ಡಿಎಂಸಿ ವತಿಯಿಂದ ಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂರ ಮತ್ತು ಬರೆಪ್ಪಾಡಿ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಮಕ್ಕಳಿಂದ ಕಲಾಸಂಜೆ, ಹಿರಿಯ ವಿದ್ಯಾರ್ಥಿಗಳಿಂದ ಮತ್ತು ನಾಡಿನ ಪ್ರಸಿದ್ಧ ಕಲಾವಿದರಿಂದ ವಿವಿಧ ವಿನೋದಾವಳಿಗಳು ಮತ್ತು ನೃತ್ಯ ವೈಭವ ನಡೆಯಿತು. ಮೈಸೂರು ತಂಡದಿಂದ ಮಣಿಪುರ್ ಸ್ಟಿಕ್ ಡ್ಯಾನ್ಸ್ ಎದೆತುಂಬಿ ಹಾಡುವೆನು ಖ್ಯಾತಿಯ ರಮ್ಯಾ ಸುಧೀಂದ್ರ, ಗಾಯಕರಾದ ಶಿವಕುಮಾರ್ ಮೈಸೂರು ಮತ್ತು ಪ್ರವೀಣ್ ಕೊಯಕ್ಕುಡೆ ಇವರಿಂದ ನಡೆದ ಮ್ಯೂಸಿಕಲ್ ನೈಟ್ ಎಲ್ಲರ ಗಮನ ಸೆಳೆಯಿತು.
























