ಡ್ರಗ್ಸ್‌ ಸಾಗಿಸುತ್ತಿದ್ದ ಮಹಿಳೆ ಸಹಿತ ಮೂವರ ಸೆರೆ

ಪೊಲೀಸರ ಕಣ್ಣಿಗೆ ಮಣ್ಣೆರಚಲು ಮಹಿಳೆಯನ್ನು ಕರೆದೊಯ್ಯುತ್ತಿದ್ದ ತಂಡ

ಮಂಗಳೂರು : ಬೆಂಗಳೂರಿನಿಂದ ಮಾದಕವಸ್ತು ಎಂಡಿಎಂಎ ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಸಪ್ಲಾಯ್‌ ಮಾಡುತ್ತಿದ್ದ ಮಹಿಳೆ ಸಹಿತ ಮೂವರ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದವರು ಡಿ. 13ರಂದು ಬಂಧಿಸಿದ್ದಾರೆ. ಮಂಗಳೂರಿನ ಮಲ್ಲೂರು ಗ್ರಾಮ ಬದ್ರಿಯಾ ನಗರ ಹೌಸ್ ನಿವಾಸಿ ಅಹಮ್ಮದ್ ಶಾಬೀತ್(35), ಬಂಟ್ವಾಳ ತಾಲೂಕಿನ ಜೋಡುಮಾರ್ಗ ಬಿ ಮೂಡ ಗ್ರಾಮದ ಮದ್ದ ಪರ್ಲಿಯಾ ಹೌಸ್ ನಿವಾಸಿ ಮಹಮ್ಮದ್ ಶಂಶೀರ್ (36) ಮತ್ತು ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಮಠದಬೆಟ್ಟು ಹೌಸ್ ನಿವಾಸಿ ನೌಶೀನ (27) ಸೆರೆಯಾದ ಆರೋಪಿಗಳು.

ಬಂಧಿತ ಆರೋಪಿಗಳಿಂದ 90 ಗ್ರಾಂ ಎಂಡಿಎಂಎ ಮಾದಕ ವಸ್ತು, ಮಾರುತಿ ಸ್ವಿಫ್ಟ್‌ ಕಾರು ಮತ್ತು ಮೊಬೈಲ್ ಪೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





















































 
 

ಅಹಮ್ಮದ್ ಶಾಬೀತ್ ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಎಂಡಿಎಂಎ ಅನ್ನು ತಂದು ಸರಬರಾಜು ಮಾಡುತ್ತಿದ್ದನು. ಜೊತೆಗೆ ಯಾರಿಗೂ ಅನುಮಾನ ಬಾರದಂತೆ ಈ ತಂಡದಲ್ಲಿ ಆರೋಪಿ ಮಹಿಳೆ ನೌಶಿನ ಎಂಬಾಕೆಯನ್ನು ಜೊತೆಗೆ ಇರಿಸಿಕೊಂಡು ಎಂಡಿಎಂಎ ಸಾಗಾಟ ಮಾಡುತ್ತಿದ್ದನು. ಕಾರಿನಲ್ಲಿ ಸದಾ ನೌಶಿನ್‌ ಈ ಆರೋಪಿಗಳ ಜೊತೆಗೆ ಇರುತ್ತಿದ್ದಳು. ಇದರಿಂದ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಡ್ರಗ್ಸ್‌ ಸಾಗಾಟಕ್ಕೆ ಸಹಕಾರ ನೀಡಿದ ಆಕೆಯನ್ನೂ ಪ್ರಮುಖ ಅರೋಪಿ ಎಂದು ಹೆಸರಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರಿನಲ್ಲಿ ಬರುತ್ತಿದ್ದ ಈ ತಂಡವನ್ನು ಡಿ. 13ರಂದು ಅರ್ಕುಳ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!
Scroll to Top