ಇಂದು ಸಂಜೆ ಶಾಮನೂರ ಶಿವಶಂಕರಪ್ಪ ಅಂತ್ಯಕ್ರಿಯೆ

ಗಣ್ಯರ ಸಹಿತ ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ದಾವಣಗೆರೆ : ಕಾಂಗ್ರೆಸ್​​ನ ಹಿರಿಯ ಮುತ್ಸದ್ದಿ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ವಯೋಸಹಜ ಅನಾರೋಗ್ಯದಿಂದ ಭಾನುವಾರ ಲಿಂಗೈಕ್ಯರಾಗಿದ್ದು, ಅವರ ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನಿಂದ ಇಂದು ನಸುಕಿನ ಜಾವ ಶಾಮನೂರರ ಪಾರ್ಥಿವ ಶರೀರ ದಾವಣಗೆರೆಗೆ ಆಗಮಿಸಿದೆ.

ಬೆಳಗ್ಗೆ 7 ರಿಂದ 12ರ ವರೆಗೆ ಶಾಮನೂರ ಪುತ್ರ ಸಚಿವ ಎಸ್​​ಎಸ್​​ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಪಾರ್ಥಿವ ಶರೀರ ಇರಲಿದೆ. ಇಲ್ಲಿ ಕುಟುಂಬ ಸದಸ್ಯರಷ್ಟೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದು, ಇಲ್ಲಿ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹೃದಯ ಭಾಗವಾದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ‌ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಜಾಗಕ್ಕೆ ಕರೆತರಲಾಗುತ್ತದೆ. ಸಂಜೆ 5.30ಕ್ಕೆ ಸೂರ್ಯ ಮುಳುಗುವುದರ ಒಳಗಾಗಿ, ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.





















































 
 

ಶಾಮನೂರು ಶಿವಶಂಕರಪ್ಪರ ಅಂತ್ಯಸಂಸ್ಕಾರಕ್ಕೆ ಕಲ್ಲೇಶ್ವರ ಮಿಲ್​ನಲ್ಲಿ ಸಿದ್ಧತೆ ನಡೆದಿದೆ. ರಾತ್ರಿಯಿಂದಲೇ ಜೆಸಿಬಿಯಿಂದ ಸಮಾಧಿ ಗುಂಡಿ ತೆಗೆಯಲಾಗಿದೆ. ಶಾಮನೂರು ಶಿವಶಂಕರಪ್ಪ ತಂದೆ, ತಾಯಿ, ಸಹೋದರರು ಹಾಗೂ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಿವಶಂಕರಪ್ಪ ಅಂತ್ಯಸಂಸ್ಕಾರ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವಿವಿಐಪಿಗಳು ಆಗಮಿಸಲಿದ್ದಾರೆ. ಒಂದು ನೂರಕ್ಕೂ ಹೆಚ್ಚು ಪಂಚಪೀಠ ಮತ್ತು ವಿರಕ್ತಮಠಗಳ ಸ್ವಾಮೀಜಿಗಳು ಭಾಗಿ ಆಗಲಿದ್ದಾರೆ‌. ಎಂಬಿಎ ಕಾಲೇಜ್, ಐಟಿಐ ಕಾಲೇಜ್‌ ಮೈದಾನದಲ್ಲಿ ಐದು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದೆ.

ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್​​ಗೆ ನಿಯೋಜಿಸಲಾಗಿದೆ. ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂತಿಮ ದರ್ಶನಕ್ಕೆ ಸುಮಾರು ಒಂದೂವರೆ ಲಕ್ಷ ಜ‌ನ ಸೇರುವ ನಿರೀಕ್ಷೆ ಇದೆ.

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಯೋಸಹಜ ಅನಾರೋಗ್ಯದ ಹಿನ್ನೆಲೆ ಕಳೆ ದಿನಗಳಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಭಾರತದ ಅತ್ಯಂತ ಹಿರಿಯ ಶಾಸಕ ಎನಿಸಿಕೊಂಡಿದ್ದ ಶಾಮನೂರ ಶಿವಶಂಕರಪ್ಪ ಜೂನ್ 16, 1931ರಂದು ದಾವಣಗೆರೆಯಲ್ಲಿ ಜನಿಸಿದ್ದರು. ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯ, ಶಿಕ್ಷಣ, ಉದ್ಯಮ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಹಲವು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಶಾಮನೂರು ಶಿವಶಂಕರಪ್ಪ ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಸಚಿವರೂ ಆಗಿದ್ದರು. ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್, ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ, ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆ ಹಾಗೂ ಬಾಪೂಜಿ ಇಂಜಿನಿಯರಿಂಗ್ ಅಸೋಸಿಯೇಷನ್‍ ಅಧ್ಯಕ್ಷರಾಗಿದ್ದರು.

error: Content is protected !!
Scroll to Top