ಸ್ಪೀಕರ್‌ ಖಾದರ್‌ ಹರಿಕಥೆ ಟೀಕೆಗೆ ಕರಾವಳಿಯಲ್ಲಿ ಆಕ್ರೋಶ

ಅನುದಾನ ಕೇಳಿದಾಗ ಹರಿಕಥೆ ಹೇಳಬೇಡಿ ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಬಾಯಿಮುಚ್ಚಿಸಿದ ಖಾದರ್‌

ಉಡುಪಿ: ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಪರ್ಯಾಯಕ್ಕೆ ಅನುದಾನ ಕೋರಿ ಮಾತನಾಡಿದ ಸಂದರ್ಭ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಡುವೆ ನಡೆದ ಮಾತಿನ ಚಕಮಕಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ. ಕರಾವಳಿ ಭಾಗದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಹೇಳಿಕೆ ಮತ್ತು ಸ್ಪೀಕರ್ ನಡೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಅಧಿವೇಶನದಲ್ಲಿ ಮಾತನಾಡುವ ವೇಳೆ ಶಾಸಕ ಯಶಪಾಲ್ ಸುವರ್ಣ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ನೀಡುವಂತೆ ಪ್ರಶ್ನೆ ಮುಂದಿಟ್ಟಿದ್ದರು. ಈ ವೇಳೆ ಸಿಟ್ಟುಗೊಂಡ ಸ್ಪೀಕರ್ ಯು.ಟಿ.ಖಾದರ್, ನಿಮ್ಮ ಹರಿಕಥೆ ನಿಲ್ಲಿಸಿ ನೇರ ವಿಷಯಕ್ಕೆ ಬನ್ನಿ, ಟಿವಿಯಲ್ಲಿ ಕಾಣಿಸಿಕೊಳ್ಳಲು ಮಾತನಾಡಬೇಡಿ ಎಂದು ಸೂಚಿಸಿದ್ದರು. ಈ ಮಾತುಗಳು ವಿವಾದಕ್ಕೆ ಕಾರಣವಾಗಿವೆ.





















































 
 

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಯಶಪಾಲ್ ಸುವರ್ಣ, ಶಾಸಕನಾಗಿ ನನಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕಿದೆ. 15 ದಿನಗಳ ಮುಂಚಿತವಾಗಿ ನಾನು ಸಲ್ಲಿಸಿದ್ದ ಪ್ರಶ್ನೆಯಿದು. ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಪೀಠದಿಂದ ಟೀಕಿಸಿರುವುದು ಸರಿಯಲ್ಲ. ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ. ಆದರೆ ಸ್ಪೀಕರ್ ಅವರು ಹಗುರವಾಗಿ, ಹಿಂದೂ ಧರ್ಮದ ಹರಿಕಥೆ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.

ನಾನು ಎಂದಿಗೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಇಲ್ಲಿನ ಅಭಿವೃದ್ಧಿ ಹಾಗೂ ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ತಂದೆಯ ಹೆಸರಲ್ಲಿ ಮತ ಕೇಳಿ ಅವರು ಶಾಸಕರಾದವರು. ಈ ನಡೆಗಳಿಂದ ನಮ್ಮ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಶನಿವಾರ ಪುತ್ತಿಗೆ ಶ್ರೀಗಳ ಕಾರ್ಯಕ್ರಮಕ್ಕೆ ಖಾದರ್ ಬರಬೇಕಿತ್ತು. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಹಾಗೂ ಧಿಕ್ಕಾರಕ್ಕೆ ಸಿದ್ಧರಾಗಿದ್ದರು. ಈ ಕಾರಣದಿಂದಲೇ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎನ್ನುವುದು ನಮಗೆ ಗೊತ್ತು. ಖಾದರ್ ಸ್ಪೀಕರ್‌ ಆಗಿಯೂ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಸಚಿವ ಸ್ಥಾನ ಪಡೆಯುವ ಆಕಾಂಕ್ಷೆಯಲ್ಲಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರನ್ನು ಟೀಕಿಸಿದರೆ ಹೈಕಮಾಂಡ್ ಗಮನ ಸೆಳೆಯಬಹುದು ಎಂಬ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಉಡುಪಿ ಜನತೆಯ ಬಳಿ ಸ್ಪೀಕರ್ ಯು.ಟಿ.ಖಾದರ್ ಕ್ಷಮೆ ಯಾಚಿಸಬೇಕು. ಪರ್ಯಾಯಕ್ಕೆ ಅನುದಾನ ಕೇಳಿದಾಗ ಟೀಕಿಸಿರುವುದು ಸರಿಯಲ್ಲ. ಕಳೆದ ಮೂರು ಮಳೆಗಾಲಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿ ನಗರ ರಸ್ತೆಗಳು, ಚರಂಡಿಗಳು ಕೊಚ್ಚಿ ಹೋಗಿವೆ. ಸರ್ಕಾರದಿಂದ ಸೂಕ್ತ ಅನುದಾನ ಬಂದಿಲ್ಲ. ಜನರು ನನ್ನನ್ನು ಆಯ್ಕೆ ಮಾಡಿರುವುದು ಜನಸೇವೆ ಮಾಡಲು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.

error: Content is protected !!
Scroll to Top