ಜನ ಸಂಚಾರವಿಲ್ಲದ ಕಾರಣ ತಪ್ಪಿದ ಅನಾಹುತ
ಬೆಂಗಳೂರು : ಶರಾಬಿನ ಮತ್ತಿನಲ್ಲಿ ಬಸ್ಸನ್ನೇ ಕದ್ದುಕೊಂಡು ಹೋದ ಘಟನೆಯೊಂದು ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಸ್ ಚಲಾಯಿಸಿಕೊಂಡು ಪಲಾಯನ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ವ್ಯಕ್ತಿ ಮತ್ತು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಬಸ್ ಡಿಕ್ಕಿಯಾಗಿ ಕುಡುಕುರು ಸಿಕ್ಕಿಬಿದ್ದಿದ್ದಾರೆ. ಘಟನೆ ನಿನ್ನೆ ರಾತ್ರಿ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಜಖಂ ಆಗಿದ್ದು, ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಚಾಲಕ ಎಂದಿನಂತೆ ಥಳಿರಸ್ತೆ ಬದಿ ಬಸ್ ಪಾರ್ಕ್ ಮಾಡಿ ಹೋಗಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಅಸಾಮಿಗಳು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ನಿಯಂತ್ರಣ ಕಳೆದುಕೊಂಡ ಬಸ್ ಎರಡು ವಿದ್ಯುತ್ ಕಂಬಗಳು ಮತ್ತು ರಸ್ತೆಬಿದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದೆ. ಕೂಡಲೇ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿದ್ದು, ಈ ವೇಳೆ ಮೂವರು ಎಸ್ಕೇಪ್ ಆಗಿದ್ದಾರೆ. ಸಿಕ್ಕಿಬಿದ್ದ ಓರ್ವನನ್ನು ಥಳಿಸಲಾಗಿದ್ದು, ಬಳಿಕ ಆರೋಪಿಯನ್ನು ಆನೇಕಲ್ ಪೊಲೀಸರ ವಶಕ್ಕೆ ನೀಡಲಾಗಿದೆ.
























