ಟೀಮ್ ಇಂಡಿಯಾಕ್ಕೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್‌ಗಳ ಕಳಪೆ ಫಾರ್ಮ್ ಹೊರೆ
ಧರ್ಮಶಾಲಾ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯ ಇಂದು ಧರ್ಮಶಾಲಾದಲ್ಲಿ ನಡೆಯಲಿದೆ. ಸರಣಿ 1-1 ಸಮಬಲ ಸಾಧಿಸಿರುವುದರಿಂದ ಈ ಪಂದ್ಯ ನಿರ್ಣಾಯಕವಾಗಿದೆ. ಮಳೆಯ ಸಾಧ್ಯತೆ ಇದ್ದರೂ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದೆ. ಧರ್ಮಶಾಲಾದ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿ, ನಂತರ ಸ್ಪಿನ್ನರ್‌ಗಳಿಗೆ ತಿರುವು ನೀಡಬಹುದು. ಭಾರತದ ಬ್ಯಾಟಿಂಗ್ ಪ್ರದರ್ಶನ ಮತ್ತು ಪಿಚ್ ಪರಿಸ್ಥಿತಿಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಿವೆ.
ಭಾರತಕ್ಕೆ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಕಳಪೆ ಫಾರ್ಮ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಖ್ಯಾತಿಯ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿನಿಂಡ ರನ್ ಸಿಡಿಯದೆ ಬಹಳ ಕಾಲವಾಯಿತು. ಈ ಸರಣಿಯಲ್ಲೂ ಅವರ ಕಳಪೆ ಫಾರ್ಮ್ ಮುಂದುವರಿದಿದ್ದು, ಇದರಿಂದಾಗಿ ಭಾರತ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಗುತ್ತಿದೆ.
ಐದು ಪಂದ್ಯಗಳ ಈ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವ ಕಾರಣ ಮೂರನೇ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಅದರಲ್ಲೂ ಭಾರತದ ಬ್ಯಾಟಿಂಗ್ ವಿಭಾಗ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬ ಕುತೂಹಲವಿದೆ. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.
ಈ ಮೊದಲು ನಡೆದಿದ್ದ ಎರಡು ಪಂದ್ಯಗಳಿಗೆ ಮಳೆ ತೊಂದರೆ ನೀಡಿರಲಿಲ್ಲ. ಆದರೆ ಇಬ್ಬನಿ ಮಾತ್ರ ಬಹಳ ತೊಂದರೆ ನೀಡಿತ್ತು. ಈ ಎರಡು ಪಂದ್ಯಗಳಿಗೆ ವಿಭಿನ್ನವಾಗಿ ಮೂರನೇ ಪಂದ್ಯದ ಸಮಯದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ ಧರ್ಮಶಾಲಾದಲ್ಲಿ ಲಘು ಮಳೆಯಾಗುವ ಮುನ್ಸೂಚನೆ ಇದೆ. ಮಳೆಯನ್ನು ಎದುರಿಸಲು ಕ್ರೀಡಾಂಗಣವು ಆತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದೆ. ಸೂಪರ್ ಸೋಕರ್‌ಗಳೊಂದಿಗೆ ಮೈದಾನವನ್ನು ಒಣಗಿಸಲು ಸಹ ವ್ಯವಸ್ಥೆ ಮಾಡಲಾಗಿದೆ.
ಧರ್ಮಶಾಲಾದಲ್ಲಿರುವ HPCA ಕ್ರೀಡಾಂಗಣದ ಪಿಚ್ ಹೆಚ್ಚಿನ ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿಯಾಗಿದ್ದು, ಇದು ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಬಹುದು. ಆದರೆ ಪಂದ್ಯ ಮುಂದುವರೆಯುತ್ತಿದ್ದಂತೆ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ. ಕ್ರೀಡಾಂಗಣವು ಎತ್ತರದಲ್ಲಿದ್ದು, ಹೈಬ್ರಿಡ್ ಪಿಚ್ ಹೊಂದಿದೆ. ಇದು ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಅನುಕೂಲಕರವಾಗಿರುತ್ತದೆ. ಈ ಮೈದಾನದಲ್ಲಿಯೂ ಸಂಜೆಯ ವೇಳೆ ಇಬ್ಬನಿ ಪ್ರಮುಖ ಅಂಶವಾಗಿರುತ್ತದೆ. ಆದಾಗ್ಯೂ, ಟಾಸ್ ಮಹತ್ವದ ಪಾತ್ರ ವಹಿಸುವುದಿಲ್ಲ. ಕಟಕ್‌ನಲ್ಲಿ ಭಾರತ ಟಾಸ್ ಸೋತರೂ ಪಂದ್ಯವನ್ನು ಗೆದ್ದಿತು. ಮುಲ್ಲನ್‌ಪುರದಲ್ಲಿ, ಭಾರತ ಟಾಸ್ ಗೆದ್ದರೂ ಪಂದ್ಯವನ್ನು ಸೋತಿತು. ಹೀಗಾಗಿ ಈ ಪಂದ್ಯದಲ್ಲಿ ಯಾವ ರೀತಿಯ ಫಲಿತಾಂಶ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಭಾರತ ತಂಡವು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಈ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ, ತಂಡವು ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಅಚ್ಚರಿಯ ಸಂಗತಿಯೆಂದರೆ ಭಾರತ ಸೋತಿರುವ ಏಕೈಕ ಪಂದ್ಯ ಇದೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿತ್ತು. ಉಭಯ ತಂಡಗಳು 2015ರ ಅಕ್ಟೋಬರ್ 2 ರಂದು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಆಫ್ರಿಕಾ ತಂಡ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಈ ಸರಣಿಯ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ 101 ರನ್‌ಗಳಿಂದ ಗೆದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಪಂದ್ಯವನ್ನು 51 ರನ್‌ಗಳಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ಸತತ ವೈಫಲ್ಯ ಕಂಡಿರುವ ಶುಭ್ಮನ್ ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಲು ಬಯಸಬಹುದು. ಗಿಲ್ ಮೊದಲ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿದರು ಮತ್ತು ಎರಡನೇ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಆದ್ದರಿಂದ, ಅವರನ್ನು ಆಡುವ 11ರಿಂದ ಕೈಬಿಡಬಹುದು.
ಕಳೆದ ಪಂದ್ಯದಲ್ಲಿ ಕೋಚ್ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದರು. ದೊಡ್ಡ ಗುರಿಯನ್ನು ಬೆನ್ನಟ್ಟಲು ಅಕ್ಷರ್ ಪಟೇಲ್ ಅವರನ್ನು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು, ಆದರೆ ಶಿವಂ ದುಬೆ ಅವರಂತಹ ದೊಡ್ಡ ಹೊಡೆತದ ಬ್ಯಾಟ್ಸ್‌ಮನ್‌ಗೆ ಎಂಟನೇ ಕ್ರಮಂಕದಲ್ಲಿ ಆಡಿಸಲಾಯಿತು. ಅಕ್ಷರ್ ಪಟೇಲ್‌ಗೆ ಸ್ವಿಂಗ್ ಬೌಲಿಂಗ್ ಅನ್ನು ಹೇಗೆ ಆಡಬೇಕೆಂದು ತಿಳಿದಿರಲಿಲ್ಲ ಮತ್ತು 21 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿದರು, ಇದರಿಂದಾಗಿ ಟೀಮ್ ಇಂಡಿಯಾ ಚೇಸಿಂಗ್‌ನಲ್ಲಿ ಗಮನಾರ್ಹವಾಗಿ ಹಿಂದುಳಿದಿತು.
ಭಾರತೀಯ ಕ್ರಿಕೆಟ್ ತಂಡದ ಅತಿದೊಡ್ಡ ಬೌಲಿಂಗ್ ಶಕ್ತಿ ಜಸ್‌ಪ್ರೀತ್ ಬುಮ್ರಾ ಮತ್ತು ಆರ್ಷದೀಪ್ ಸಿಂಗ್. ಆದಾಗ್ಯೂ, ಈ ಇಬ್ಬರು ಬೌಲರ್‌ಗಳು ಹಿಂದಿನ ಪಂದ್ಯದಲ್ಲಿ ಎಂಟು ಓವರ್‌ಗಳಲ್ಲಿ 99 ರನ್‌ಗಳನ್ನು ಬಿಟ್ಟುಕೊಟ್ಟರು. ಬುಮ್ರಾ 45 ರನ್‌ಗಳನ್ನು ಬಿಟ್ಟುಕೊಟ್ಟರೆ, ಆರ್ಷದೀಪ್ 54 ರನ್‌ಗಳನ್ನು ಬಿಟ್ಟುಕೊಟ್ಟರು. ಇಬ್ಬಋಿಗೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
























