ಸವಣೂರು: ಉಸಿರಾಟದ ಸಮಸ್ಯೆ, ವಾಂತಿಯಿಂದ ಬಳಲುತ್ತಿದ್ದ ಒಂದೂವರೆ ತಿಂಗಳಿನ ಮಗುವೊಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಓಡಂತರ್ಯದಲ್ಲಿ ನಡೆದಿದೆ.
ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳಾದ ಮಾಧವ ಮತ್ತು ವೀಣಾ ದಂಪತಿಯ ಮಗು ನಿಶ್ಚಿತ್ ಮೃತಪಟ್ಟ ದುರ್ದೈವಿ.
ಡಿ. 5 ರಂದು ಮಗುವಿಗೆ ವಾಂತಿ ಕಾಣಿಸಿಕೊಂಡಿದ್ದು, ತಕ್ಷಣವೇ ಕುಂಬ್ರದಲ್ಲಿರುವ ಖಾಸಗಿ ಕ್ಲಿನಿಕ್ ಒಂದರಿಂದ ಮಗುವಿಗೆ ಔಷಧಿ ತಂದಿದ್ದಾರೆ. ಆದರೆ, ಆ ದಿನ ರಾತ್ರಿ ವೇಳೆ ಮಗುವಿನ ಆರೋಗ್ಯ ಮತ್ತಷ್ಟು ಹದೆಗೆಟ್ಟಿದ್ದು, ವಾಂತಿಯ ಜೊತೆಗೆ ಉಸಿರಾಟದ ತೊಂದರೆ ಆರಂಭವಾಗಿದೆ. ತಕ್ಷಣವೇ ಪೋಷಕರು ಮಗುವನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಅಲ್ಲಿಂದ ವೈದ್ಯರ ಸೂಚನೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಆದರೆ ಮಂಗಳೂರಿನ ಆಸ್ಪತ್ರೆಯಲ್ಲಿ ಮಗುವನ್ನು ವೈದ್ಯರು ಪರೀಕ್ಷೆ ನಡೆಸಿದ್ದು, ಅದಾಗಲೇ ಮಗು ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.
ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























