ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಂದಿದ್ದ ಬೆದರಿಕೆ ಇ-ಮೇಲ್
ಬೆಂಗಳೂರು : ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬೆಳಗ್ಗೆ ಬಂದಿದ್ದ ಅನಾಮಧೇಯ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶದ ಮೂಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಕರೆ ಕಳುಹಿಸಿದ ವ್ಯಕ್ತಿಯನ್ನು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದಾರೆ. ಪೊಲೀಸ್ ತನಿಖೆಯ ವೇಳೆ ಈ ಬಾಂಬ್ ಬೆದರಿಕೆ ಇ-ಮೇಲ್ ತಮಿಳುನಾಡಿನ ಮೈಲಾಪುರದ 13 ವರ್ಷದ ಬಾಲಕಿಯಿಂದ ಬಂದಿರುವುದು ಗೊತ್ತಾಗಿದೆ.
ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಗಮನ ಸೆಳೆಯುವ ಉದ್ದೇಶದಿಂದ ಈ ಇ-ಮೇಲ್ ಕಳುಹಿಸಿದ್ದಾಳೆ ಎನ್ನಲಾಗಿದೆ. ಮೇಲ್ನಲ್ಲಿ ಬಾಲಕಿ ಮೊದಲಿಗೆ ‘ಆರ್ಡಿಎಕ್ಸ್’ ಎಂಬ ಪದ ಬಳಸಿದ್ದು, ನಂತರ ತನಗಾಗಿರುವ ಅನ್ಯಾಯವನ್ನು ವಿವರವಾಗಿ ಬರೆದಿದ್ದಾಳೆ. ಎಲ್ಲರ ಗಮನ ಸೆಳೆಯಲು ಈ ರೀತಿ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲಾರ ಹಾಗೂ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಒಂದೇ ಸಮಯದಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಆಡಳಿತ ಯಂತ್ರ ಅಲರ್ಟ್ ಆಗುವಂತೆ ಮಾಡಿತು. ಬೆಳಿಗ್ಗೆ ಸುಮಾರು 6 ಗಂಟೆಗೆ ಅನಾಮಧೇಯ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಸುಮಾರು 3 ಗಂಟೆಗಳ ಬಳಿಕ ಈ ವಿಚಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ತಕ್ಷಣವೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅಗ್ನಿಶಾಮಕ ದಳ ಹಾಗೂ ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದಾಗ ಹುಸಿ ಬೆದರಿಕೆ ಎಂದು ದೃಢವಾಗಿತ್ತು.
























