ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವರನ್ನು ಪ್ರಶ್ನಿಸಿದ MLC ಕಿಶೋರ್ ಕುಮಾರ್

ಪುತ್ತೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ, ಸುಲಿಗೆ, ಮನೆಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳ ಕುರಿತಾಗಿ ಗೃಹಸಚಿವರನ್ನು ಕಠಿಣವಾಗಿ ಪ್ರಶ್ನಿಸಿದರು.

ಅವರ ಪ್ರಶ್ನೆಗೆ ಗೃಹಸಚಿವರು ಉತ್ತರಿಸಿದ್ದು, ಅವರು ನೀಡಿದ ಅಧಿಕೃತ ಅಂಕಿಅಂಶಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತಿವೆ.

MLC ಕಿಶೋರ್ ಪತ್ರಿಕೆಗೆ ಪ್ರತಿಕ್ರಿಯೆ ನೀಡುತ್ತಾ ಅಂಕಿ ಅಂಶಗಳ ಮೇಲೆಯೂ ಬೆಳಕು ಚೆಲ್ಲಿದ್ದು, ಕಳೆದ ಮೂರು ವರ್ಷಗಳ ಅಂಕಿಅಂಶವೇ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದನ್ನು ಸಾಬೀತುಪಡಿಸುತ್ತದೆ. 2023ರಲ್ಲಿ ದಾಖಲಾಗಿದ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 28 ಸಾವಿರ ಪತ್ತೆಯಾಗಿಲ್ಲ. 2024ರಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ 23 ಸಾವಿರ ಪತ್ತೆಯಾಗಿಲ್ಲ. 2025ರಲ್ಲೇ ಈಗಾಗಲೇ 30 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 8 ಸಾವಿರ ಪ್ರಕರಣ ಪತ್ತೆಯೇ ಆಗಿಲ್ಲ. ಇದು ಜನರನ್ನು ಭಯಕ್ಕೆ ತಳ್ಳುವಂತೆ ಆಗಿದೆ ಎಂದಿದ್ದಾರೆ.





















































 
 

ಹಾಗೆಯೇ ರಾಜ್ಯದಲ್ಲಿ ಕಳೆದ ಎಂಟು ತಿಂಗಳಲ್ಲಿ ಒಬ್ಬ ACP ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಕುಗ್ಗಿಸಿದೆ. ನಮ್ಮ ರಾಜ್ಯ ‘ಕಳ್ಳಕಾಕರ ರಾಜ್ಯ’ವಾಗುತ್ತಿರುವಂತೆ ಕಂಡುಬರುತ್ತಿದೆ. ಗೃಹಸಚಿವರಿಗೆ ಇಲಾಖೆಯ ಮೇಲಿನ ಹಿಡಿತವಿಲ್ಲ, ಸರ್ಕಾರಕ್ಕೆ ಗೃಹ ಇಲಾಖೆಯ ಮೇಲಿನ ಕಂಟ್ರೋಲ್ ಕಾಣುತ್ತಿಲ್ಲ. ಜನರ ಸುರಕ್ಷತೆಯೇ ಚಿಂತಾಜನಕವಾಗಿ ಪರಿಣಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಕೆಲವು ಪ್ರಾಮಾಣಿಕ ಅಧಿಕಾರಿಗಳ ಸೇವೆಯನ್ನು ಮೆಚ್ಚಿಕೊಂಡ ಅವರು, ದ.ಕ. SP ಡಾ. ಅರುಣ್ ಶಂಕರ, ಹಿಂದಿನ ದ.ಕ. SP ಯತೀಶ್, ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರ ಶಿಸ್ತಿನ ಕಾರ್ಯನೈಪುಣ್ಯವನ್ನು ಶ್ಲಾಘಿಸಿದ್ದಾರೆ. ರಾಜ್ಯದಲ್ಲಿ ಇದೇ ರೀತಿಯ ಪ್ರಾಮಾಣಿಕ ಮತ್ತು ಪರಿಣಾಮಕಾರಿ ಅಧಿಕಾರಿಗಳು ಇನ್ನಷ್ಟು ಬೇಕು ಎಂದು ಹೇಳಿದ್ದಾರೆ.

ಜೊತೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಸಿಸ್ ಉಗ್ರ ಮೊಬೈಲ್ ಬಳಸುವುದರ ಮೂಲಕ ವಾಟ್ಸಪ್ ವೀಡಿಯೋ ಕಾಲ್ ಮಾಡಿದ ಘಟನೆಯನ್ನು ಉಲ್ಲೇಖಿಸಿ, ಇಂತಹ ಭದ್ರತಾ ವೈಫಲ್ಯಗಳು ರಾಷ್ಟ್ರದ ಮಾನವನ್ನು ಹರಾಜು ಮಾಡುತ್ತಿವೆ. ರಾಜ್ಯದ ಜೈಲು ನಿರ್ವಹಣೆಯಲ್ಲಿಯೇ ಗಂಭೀರ ಲೋಪವಿದೆ ಎಂಬುದನ್ನು ಗೃಹಸಚಿವರ ಗಮನಕ್ಕೆ ತಂದಿದ್ದಾರೆ.

ಇದೇ ವೇಳೆ PSI ನೇಮಕಾತಿ ಇನ್ನೂ ನಡೆಯದೆ ಇರುವುದನ್ನು ಪ್ರಶ್ನಿಸಿದ ಶಾಸಕರು, ಯುವಕರ ಭವಿಷ್ಯವನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೃಹಸಚಿವರು ನೀಡಿದ ಉತ್ತರಕ್ಕೆ MLC ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವರು “ದ್ವಿಚಕ್ರ ವಾಹನಗಳು spare parts ಆಗಿ ಮಾರಾಟವಾಗುತ್ತಿವೆ, ಪತ್ತೆಹಚ್ಚಲು ಕಷ್ಟ” ಎನ್ನುವುದನ್ನೂ, “ವಾಹನ ಮಾಲೀಕರು insurance ಹಣ ಪಡೆಯಲು C-Report ಬೇಡುತ್ತಾರೆ” ಎನ್ನುವುದನ್ನೂ ಸಮರ್ಥಿಸಿಕೊಂಡರು. ಈ ಸಮರ್ಥನೆಯನ್ನು ಶಾಸಕರು ಸಂಪೂರ್ಣ ಅಸಮರ್ಪಕ ಎಂದು ತಿರಸ್ಕರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬ ನಾಗರಿಕನು ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿದ ಕೆಲವೇ ಸೆಕೆಂಡ್‌ಗಳಲ್ಲಿ ಕಳ್ಳತನವಾಗುತ್ತದೆ ಎಂದರೆ ಇದು ದೊಡ್ಡ ದೌರ್ಬಲ್ಯ. ಸೀಟ್‌ಬೆಲ್ಟ್ ಹಾಕದಿದ್ದರೆ ದಂಡ ಹಾಕುವ ಪೊಲೀಸ್ ಇಲಾಖೆ, ಜನರ ವಾಹನವನ್ನು ಕದ್ದ ಕಳ್ಳರನ್ನು ಹಿಡಿಯಲು ಅಸಮರ್ಥವಾಗಿರುವುದು ಹೇಗೆ? ಜನರು ಇದಕ್ಕೆ ಉತ್ತರ ಬಯಸುತ್ತಾರೆ ಎಂಬುದಾಗಿ ಹೇಳಿದ್ದಾರೆ.

ರಾಜ್ಯದ ಹೊರರಾಜ್ಯ ಗಡಿಗಳು ಕಳ್ಳತನಕ್ಕೆ ಪ್ರಮುಖ ಮಾರ್ಗವಾಗಿರುವುದರಿಂದ, ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆಯ CCTV, ನಿಗಾವ್ಯವಸ್ಥೆ ಮತ್ತು ಕಣ್ಗಾವಲುಗಳನ್ನು ಬಲಪಡಿಸಲು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

error: Content is protected !!
Scroll to Top