ಮೊದಲ ಟಿ20 ಪಂದ್ಯದಲ್ಲಿ ಕಳಪೆ ದಾಖಲೆ ಬರೆದು ಸೋತ ದಕ್ಷಿಣ ಆಫ್ರಿಕಾ

ಭಾರತಕ್ಕೆ 101 ರನ್‌ಗಳ ಭರ್ಜರಿ ಗೆಲುವು

ಕಟಕ್‌ : ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಅರ್ಧಶತಕ, ಬೌಲರ್‌ಗಳು ಸಾಂಘಿಕ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 101 ರನ್‌ಗಳಿಂದ ಭರ್ಜರಿ ಜಯ ಗಳಿಸಿದೆ. ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 74 ರನ್​ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 101 ರನ್​ಗಳ ಭಾರಿ ಅಂತರದ ಜಯ ಸಾಧಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆಗೆ ಕೊರಳೊಡ್ಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 175 ರನ್ ಕಲೆಹಾಕಿತು. ಬ್ಯಾಟಿಂಗ್​ನಲ್ಲಿ ಹಾರ್ದಿಕ್ ಪಾಂಡ್ಯ ಅರ್ಧಶತಕದ ಇನ್ನಿಂಗ್ಸ್ ಅಡಿದರೆ, ಬೌಲಿಂಗ್​ನಲ್ಲೂ 1 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್ ಮಾಡಿದ ಭಾರತದ ಪರ ಹಾರ್ದಿಕ್ ಪಾಂಡ್ಯ ಅರ್ಧ ಶತಕದ ಇನ್ನಿಂಗ್ಸ್ ಆಡಿದರು. ಹಾರ್ದಿಕ್ 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 59 ರನ್ ಗಳಿಸಿದರು. ತಿಲಕ್ ವರ್ಮಾ 26 ಮತ್ತು ಅಕ್ಷರ್ ಪಟೇಲ್ 23 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ ಪರ ಯಾವ ಬ್ಯಾಟ್ಸ್​ಮನ್ ಕೂಡ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಇತ್ತ ದಕ್ಷಿಣ ಆಫ್ರಿಕಾ ಪರ ಬೌಲಿಂಗ್​ನಲ್ಲಿ ಮಿಂಚಿದ ಲುಂಗಿ ಎನ್‌ಗಿಡಿ ಮೂರು ವಿಕೆಟ್ ಪಡೆದರೆ, ಲುಥೋ ಸಿಪಾಮ್ಲಾ ಎರಡು ವಿಕೆಟ್ ಪಡೆದರು.





















































 
 

176 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿತು. ತಂಡದ ಯಾವ ಬ್ಯಾಟ್ಸ್​ಮನ್​ಗೂ ಟೀಂ ಇಂಡಿಯಾ ಬೌಲಿಂಗ್​ ಮುಂದೆ ನೆಲಕಚ್ಚಿ ಆಡಲು ಸಾಧ್ಯವಾಗಲಿಲ್ಲ. ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 22 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ತಂಡದ ಉಳಿದ ಏಳು ಆಟಗಾರರು 10 ರನ್ ಗಳಿಸಲು ಸಹ ವಿಫಲರಾದರು. ಭಾರತದ ಪರ ಆರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.

ಹಲವು ದಾಖಲೆ ನಿರ್ಮಾಣ

ಟೀಂ ಇಂಡಿಯಾ 100 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಟಿ20 ಪಂದ್ಯ ಗೆದ್ದಿರುವುದು ಇದು ಒಂಬತ್ತನೇ ಬಾರಿ. ಇದು ಮಾತ್ರವಲ್ಲದೆ ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ಸಿಕ್ಸರ್​ಗಳ ಮೈಲಿಗಲ್ಲು ದಾಟಿದರೆ, ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳನ್ನು ಪೂರೈಸಿದರು. ಹಾಗೆಯೇ ಯುವ ಬ್ಯಾಟ್ಸ್​ಮನ್ ತಿಲಕ್ ವರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಅತಿ ಕಿರಿಯ ಬ್ಯಾಟ್ಸ್​ಮನ್ ಎಂಬ ದಾಖಲೆ ನಿರ್ಮಿಸಿದರು.

error: Content is protected !!
Scroll to Top