ಕಾರ್ಮಿಕ ಕಾಯಿದೆಯಲ್ಲಿಲ್ಲದ ಅಧಿಕಾರ ಬಳಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಾದ
ಬೆಂಗಳೂರು : ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ಋತುಚಕ್ರ ರಜೆಯನ್ನು ಕಡ್ಡಾಯವಾಗಿ ನೀಡಲು ರಾಜ್ಯ ಸರ್ಕಾರ ಇತ್ತೀಚಿಗೆ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಹೋಟೆಲ್ ಮಾಲೀಕರ ಸಂಘದ ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ ಇಂದು ಅರ್ಜಿ ವಿಚಾರಣೆಗೆ ಬಂದಿದ್ದು, ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು.
ಕರ್ನಾಟಕ ಸರ್ಕಾರ ನವೆಂಬರ್ 12ರಂದು ವೇತನ ಸಹಿತ ಋತುಚಕ್ರ ರಜೆ ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು. ಕಾರ್ಮಿಕ ಇಲಾಖೆಯು ಕಾರ್ಖಾನೆ ಕಾಯ್ದೆ, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ ಸೇರಿದಂತೆ ಹಲವಾರು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಬರುವ ಸಂಸ್ಥೆಗಳು ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸುವಂತೆ ಆದೇಶವನ್ನು ಹೊರಡಿಸಿತ್ತು.
ಆದರೆ ಇತ್ತೀಚೆಗೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರಕ್ಕೆ ಅಂತಹ ಆದೇಶವನ್ನು ವಿಧಿಸಲು ಕಾರ್ಮಿಕ ಕಾನೂನುಗಳ ಪ್ರಕಾರ ಅಧಿಕಾರವಿಲ್ಲವೆಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರವು 1948ರ ಕಾರ್ಖಾನೆ ಕಾಯ್ದೆ, 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು 1961ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳಿಗೆ ಮೇಲೆ ತಿಳಿಸಿದ ನೀತಿಯನ್ನು ಅನುಸರಿಸಲು ನಿರ್ದೇಶನ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ರಜೆ ನೀತಿಗಳು ವೈಯಕ್ತಿಕ ಸಂಸ್ಥೆಗಳಿಗೆ ಆಂತರಿಕ ಆಡಳಿತಾತ್ಮಕ ವಿಷಯವಾಗಿ ಉಳಿಯಬೇಕು ಎಂದು ಹೋಟೆಲ್ ಮಾಲೀಕರ ಸಂಘ ಅರ್ಜಿ ಸಲ್ಲಿಸಿತ್ತು.
ಅಸೋಸಿಯೇಶನ್ನ ಪರ ವಾದ ಆಲಿಸಿದ ನ್ಯಾ.ಜ್ಯೋತಿ ಮೂಲಿಮನಿ ಅವರಿದ್ದ ಹೈಕೋರ್ಟ್ ಪೀಠ ಋತುಚಕ್ರ ರಜೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಕಾಯ್ದೆಯಲ್ಲಿಲ್ಲದ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೊಳಿಸಿದೆ. ಸರ್ಕಾರದ ಏಕಪಕ್ಷೀಯ ಆದೇಶದಿಂದ ಹೋಟೆಲ್ಗಳಿಗೆ ಸಮಸ್ಯೆ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿತ್ತೆ ಎಂದು ಪ್ರಶ್ನೆ ಹಾಕಿದ ನ್ಯಾಯಮೂರ್ತಿಯವರಿಗೆ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ಉತ್ತರ ನೀಡಿದ್ದು, ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
























