ಸರಣಿ ಉಳಿಸಿಕೊಳ್ಳಲು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ
ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಈಗ ಅಂತಿಮಪಂದ್ಯ ಇಂದು ಮಧ್ಯಾಹ್ನ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಸರಣಿ 1-1 ರಲ್ಲಿ ಸಮಬಲಗೊಂಡಿರುವುದರಿಂದ ಸರಣಿ ವಿಜೇತರನ್ನು ನಿರ್ಧರಿಸಲು ಇಂದಿನ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿರುವ ಭಾರತ ಏಕದಿನ ಸರಣಿಯಲ್ಲಾದರೂ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಭಾರತ ತಂಡಕ್ಕೆ ಇದು ಮಾಡು ಇಲ್ಲ ಮಡಿ ಪಂದ್ಯವಾಗಿದೆ. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಏಕದಿನ ಪಂದ್ಯ ನಡೆಯಲಿದೆ.
ಎರಡನೇ ಏಕದಿನದಲ್ಲಿ 358 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ ಇದನ್ನು ಉಳಿಸಿಕೊಳ್ಳುವಲ್ಲಿ ಭಾರತ ವಿಫಲವಾಗಿತ್ತು. ಸರಣಿಯುದ್ದಕ್ಕೂ ಭಾರತದ ಬೌಲಿಂಗ್ ಪಡೆಯ ದೌರ್ಬಲ್ಯ ಜಗಜ್ಜಾಹೀರಾಗುತ್ತಿದೆ. ಅನುಭವಿ ಬೌಲರ್ಗಗಳ ಕೊರತೆಯನ್ನು ಭಾರತ ಅನುಭವಿಸುತ್ತಿದೆ. ಇದರ ಭರಪೂರ ಪ್ರಯೋಜನವನ್ನು ದಕ್ಷಿಣ ಆಫ್ರಿಕಾ ಎತ್ತುತ್ತಿದೆ.
ಸರಣಿಯಲ್ಲಿ ಸತತ ಎರಡು ಶತಕಗಳನ್ನು ಗಳಿಸಿರುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್‌ನಿಂದ ಭಾರತ ತಂಡದ ಮನೋಸ್ಥೈರ್ಯ ಹೆಚ್ಚಾಗಿದೆ. ಗಾಯಗೊಂಡ ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಕೆ.ಎಲ್ ರಾಹುಲ್, ಮೊದಲ ಏಕದಿನ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವ ಮೂಲಕ ನಾಯಕತ್ವವನ್ನು ಪ್ರದರ್ಶಿಸಿದರು. ರಾಯ್‌ಪುರದಲ್ಲಿ ಎರಡನೇ ಏಕದಿನ ಪಂದ್ಯವನ್ನು ದಕಿಣ ಆಫ್ರಿಕಾ ನಾಲ್ಕು ವಿಕೆಟ್‌ಗಳಿಂದ ಗೆದ್ದು ಗಮನಾರ್ಹ ಸಾಧನೆ ಮಾಡಿದೆ.
ಈ ನಿರ್ಣಾಯಕ ಕದನಕ್ಕೆ ಟೀಮ್ ಇಂಡಿಯಾ ಕೆಲ ಬದಲಾವಣೆ ಮಾಡಬಹುದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತೊಂದರೆ ಅನುಭವಿಸುತ್ತಿರುವ ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡಬಹುದು ಮತ್ತು ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಅವಕಾಶ ನೀಡಬಹುದು. ಪಂತ್ ಸೇರ್ಪಡೆಯಿಂದ ಭಾರತಕ್ಕೆ ಡೆತ್ ಓವರ್‌ಗಳಲ್ಲಿ ಹೆಚ್ಚು ಅಗತ್ಯವಿರುವ ಬಲ ದೊರೆಯುತ್ತದೆ.
ಬೌಲಿಂಗ್ ವಿಭಾಗದಲ್ಲೂ ಬದಲಾವಣೆಗಳಾಗುವ ಸಾಧ್ಯತೆ ಇದೆ. ಕಳಪೆ ಫಾರ್ಮ್‌ನಲ್ಲಿರುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪರಿಗಣಿಸಬಹುದು. ರೆಡ್ಡಿ ಸೇರ್ಪಡೆಯಿಂದ ಭಾರತದ ಕೆಳ ಕ್ರಮಾಂಕದ ಬ್ಯಾಟಿಂಗ್ ಬಲಗೊಳ್ಳಬಹುದು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು ತಮ್ಮ ಕೊನೆಯ ಪಂದ್ಯವನ್ನು ಗೆದ್ದ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ.
























