ಡಿಕೆಶಿ ಪರ ಘೋಷಣೆ : ಮಿಥುನ್‌ ರೈಗೆ ಶೋಕಾಸ್‌ ನೋಟಿಸ್‌

ಡಿಕೆಶಿ ಮುಖ್ಯಮಂತ್ರಿಯಾಗಲೆಂದು ಘೋಷಣೆ ಕೂಗಿದ್ದಕ್ಕೆ ನೋಟಿಸ್‌ ನೀಡಿದ ಕಾಂಗ್ರೆಸ್‌

ಮಂಗಳೂರು : ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಕಾಂಗ್ರೆಸ್‌ನ ಕುರ್ಚಿ ಕದನ ಶಾಂತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಮಂಗಳೂರಿನಲ್ಲಿ ಬುಧವಾರ ನಡೆದ ಘಟನೆ ಅದಿನ್ನೂ ಬೂದಿಮುಚ್ಚಿದ ಕೆಂಡ ಎನ್ನುವುದನ್ನು ಬಹಿರಘಪಡಿಸಿದೆ. ಕೊಣಾಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮುಂದೆ ಡಿಕೆ ಡಿಕೆ… ಎಂದು ಘೋಷಣೆ ಕೂಗಿದ ವಿಚಾರ ಈಗ ಹೈಕಮಾಂಡ್‌ನ ಉರಿಗಣ್ಣಿಗೆ ಗುರಿಯಾಗಿದೆ. ಆ ಪ್ರಸಂಗದ ರೂವಾರಿ ಎನ್ನಲಾಗಿರುವ ಡಿ.ಕೆ ಶಿವಕುಮಾರ್ ಆಪ್ತ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈಗೆ ಹೈಕಮಾಂಡ್​ ನೋಟಿಸ್‌ ಜಾರಿ ಮಾಡಿದೆ. ಪಕ್ಷದ ಶಿಸ್ತು ಉಲ್ಲಂಘನೆ ಬಗ್ಗೆ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಶೋಕಾಸ್ ನೋಟಿಸ್‌ ನೀಡಿದ್ದಾರೆ.

ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆ.ಸಿ.ವೇಣುಗೋಪಾಲ್ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ದರು. ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಹಾಗೂ ಮತ್ತಿತರರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದಲ್ಲದೆ ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ದರು. ಸಿಎಂ-ಡಿಕೆಶಿ ನಡುವಿನ ಕುರ್ಚಿ ಕದನ ಶಾಂತವಾಗಿರುವಾಗಲೇ ಈ ರೀತಿ ಘೋಷಣೆ ಕೂಗಿರುವುದು ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಕಾರಣ ಕೇಳಿ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಅವರು ಶೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ. ಆ ನಂತರ ಸಿದ್ದರಾಮಯ್ಯ ಆಗಮಿಸಿದಾಗ ಐವನ್‌ ಡಿ ಸೋಜ ಮತ್ತು ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಅವರಿಗೂ ಜೈಕಾರ ಹಾಕಲಾಗಿತ್ತು.





















































 
 

ಮಂಗಳೂರಿನಲ್ಲಿ ಸಿಎಂ ಹಾಗೂ ವೇಣುಗೋಪಾಲ್ ಎದುರು ಡಿಕೆ ಡಿಕೆ ಅಂತ ಘೋಷಣೆ ಕೂಗಿರುವುದನ್ನು ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದರು. ಅಭಿಮಾನಿಗಳು ಘೋಷಣೆ ಕೂಗಿರಬಹುದು. ರಾಜಕೀಯದಲ್ಲಿ ಎಲ್ಲ ತರಹದ ಜೈಕಾರ, ಧಿಕ್ಕಾರ ಇರುತ್ತೆ. ಡಿಕೆ ಡಿಕೆ ಘೋಷಣೆಯನ್ನ ಕಳೆದ 10 ವರ್ಷದಿಂದ ಕೂಗ್ತಾರೆ. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ, ಇನ್ನು ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದರು.

ಕರ್ನಾಟಕದಲ್ಲಿ ನವಂಬರ್ 20ರಿಂದ ಸಿಎಂ ಕುರ್ಚಿಗಾಗಿ ಫೈಟ್ ಶುರುವಾಗಿತ್ತು. ಡಿಸಿಎಂ ಡಿಕೆಶಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಬೆಂಬಲಿಗ ಶಾಸಕರು, ಸಚಿವರು ದೆಹಲಿ ಯಾತ್ರೆ ನಡೆಸಿದ್ದರು. ಹೀಗೆ ಎರಡು ಮೂರು ತಂಡಗಳು ದೆಹಲಿಗೆ ಹೋಗಿ ಬಂದಿವೆ. ಮಾಧ್ಯಮಗಳಲ್ಲೂ ಸಿಎಂ ಸ್ಥಾನ ಯಾರ ಪಾಲಾಗುತ್ತೆ ಎಂಬ ಬಗ್ಗೆ ದೊಡ್ಡ ಚರ್ಚೆಯಾಯಿತು. ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ, ಬ್ರೇಕ್‌ಫಾಸ್ಟ್ ಮೀಟಿಂಗ್ ಆರೇಂಜ್ ಮಾಡಿತ್ತು. ಹೀಗಾಗಿ ತಾತ್ಕಾಲಿಕವಾಗಿ ಸಿಎಂ ಕುರ್ಚಿ ಫೈಟ್‌ಗೆ ಬ್ರೇಕ್ ಬಿದ್ದಿದೆ ಎಂದು ಭಾವಿಸಲಾಗಿತ್ತು.

error: Content is protected !!
Scroll to Top