ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ, ಬಂಟ ದೈವಸ್ಥಾನದಲ್ಲಿ ಹರಕೆ ನೇಮ
ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾದ ಭರ್ಜರಿ ಯಶಸ್ಸಿಯಾದ ಹಿನ್ನೆಲೆಯಲ್ಲಿ ಚಿತ್ರತಂಡದವರು ನಟ, ನಿರ್ದೇಶಕ ರಿಷಬ್ ಶೆಟ್ಟಿ ನೇತೃತ್ವದಲ್ಲಿ ಗುರುವಾರ ಮಂಗಳೂರಿಗೆ ಬಂದು ದೈವಕ್ಕೆ ಹೇಳಿಕೊಂಡಿದ್ದ ಹರಕೆ ತೀರಿಸಿದ್ದಾರೆ. ಮಂಗಳೂರಿನಲ್ಲಿ ಕಾಂತಾರ ತಂಡದಿಂದ ಹರಕೆ ನೇಮೋತ್ಸವ ಮಾಡಲಾಗಿದೆ. ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆದಿದೆ. ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಹರಕೆ ನೇಮೋತ್ಸವ ಮಾಡಲಾಗಿದೆ.
ವರಾಹ ಪಂಜುರ್ಲಿ ದೈವದ ನೇಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ರಿಷಬ್ ಶೆಟ್ಟಿ ಅವರು ಪತ್ನಿ ಹಾಗೂ ಮಕ್ಕಳ ಜೊತೆ ನೇಮೋತ್ಸವಕ್ಕೆ ಆಗಮಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಇದರಲ್ಲಿ ಭಾಗಿ ಆಗಿದ್ದಾರೆ. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕೂಡ ಕಾಂತಾರ-ಚಾಪ್ಟರ್ 1 ಚಿತ್ರತಂಡ ಭಾಗಿಯಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ರಿಷಬ್ ಆಗಮಿಸಿದ್ದರು. ಅದೇ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಅವರ ಕುಟುಂಬದಿಂದ ಹರಕೆ ನೇಮೋತ್ಸವ ಸಲ್ಲಿಕೆ ಮಾಡಲಾಗಿದೆ.
ಈ ಮೊದಲು ಬಂದಾಗ ಸಿನಿಮಾ ಸಂಸಾರದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್ಗಳು ಇರ್ತಾರೆ, ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ಕೊಟ್ಟಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್ ಶೆಟ್ಟಿಗೆ ದೈವ ಸೂಚಿಸಿತ್ತು. ಕಾಂತಾರ-ಚಾಪ್ಟರ್ 1 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು, ಅದಕ್ಕಾಗಿ ರಿಷಬ್ ಶೆಟ್ಟಿ ಅವರು ಹರಕೆ ಸಲ್ಲಿಸಿದ್ದಾರೆ.
























