ಪುತ್ತೂರಿನಿಂದ ಮೂಡುಬಿದಿರೆ ತನಕ ಪ್ರಯಾಣಿಸಿ ಬಂದಿದ್ದ ಹೆಬ್ಬಾವು
ಮೂಡುಬಿದಿರೆ : ಭಾರಿ ಗಾತ್ರದ ಹೆಬ್ಬಾವೊಂದು ಮದುವೆ ದಿಬ್ಬಣದ ಬಸ್ಸಿನಲ್ಲಿ ಪುತ್ತೂರಿನಿಂದ ಮೂಡುಬಿದಿರೆಯ ತನಕ ಪ್ರಯಾಣಿಸಿ ಬಂದ ಘಟನೆ ಮಂಗಳವಾರ ಸಂಭವಿಸಿದೆ. ಮೂಡುಬಿದಿರೆಯ ಜೈನ್ ಪೇಟೆಯ ಗೋಳಿಬಜೆ ಸೆಂಟರ್ ಹೋಟೆಲ್ ಬಳಿ ಉಪಾಹಾರ ಸೇವಿಸಲು ಬಸ್ ನಿಲ್ಲಿಸಿದಾಗ ಬಸ್ಸಿನೊಳಗೆ ಆರು ಅಡಿಗೂ ಉದ್ದ ಇರುವ ಹಾವು ಸುರುಳಿ ಸುತ್ತಿಕೊಂಡು ಮಲಗಿರುವುದು ಕಂಡುಬಂದಿದೆ.
ಮದುವೆಯ ಬೆಂಗಾವಲು ಬಸ್ಸಿನೊಳಗೆ ಈ ಹಾವು ಇತ್ತು. ಪುತ್ತೂರಿನಿಂದ ಹೆಬ್ರಿ ಕಡೆಗೆ ಈ ಬಸ್ ಹೋಗುತ್ತಿತ್ತು. ಪಡುಕೊಣಾಜೆಯ ಉರಗ ರಕ್ಷಕ ಗಡ್ಡ ದಿನೇಶ್ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಿದರು. ಪುತ್ತೂರಿನಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಬಸ್ ಕಾಫಿ ವಿರಾಮಕ್ಕಾಗಿ ಹೋಟೆಲ್ ಬಳಿ ನಿಂತಿತ್ತು. ಪ್ರಯಾಣಿಕರು ಇಳಿದ ನಂತರ ಚಾಲಕ ವಾಹನದೊಳಗೆ ಪರಿಶೀಲಿಸಿದಾಗ ಹೆಬ್ಬಾವು ಸದ್ದಿಲ್ಲದೆ ಮಲಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳೀಯರು ದಿನೇಶ್ ಅವರನ್ನು ಸಂಪರ್ಕಿಸಿದರು, ಅವರು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟರು.
























