ಹ್ಯೂಬ್ಲೋಟ್ ಹಗರಣವನ್ನು ನೆನಪಿಸಿ ಕಾಲೆಳೆದ ಬಿಜೆಪಿ
ಬೆಂಗಳೂರು : ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಟಿಕೋಳಿ ಸಾರು ಜೊತೆಗೆ ಬಿಸಿಬಿಸಿ ಇಡ್ಲಿಯ ಬ್ರೇಕ್‌ಫಾಸ್ಟ್ ಸವಿದ ಬಳಿಕ ವಿವಾದವೊಂದು ಮೆಲ್ಲನೆ ತಲೆ ಎತ್ತಿದೆ. ಈ ವಿವಾದಕ್ಕೆ ಕಾರಣ ಬ್ರೇಕ್‌ಫಾಸ್ಟ್ ಅಲ್ಲ ಬದಲಾಗಿ ಸಿಎಂ ಮತ್ತು ಡಿಸಿಎಂ ಕಟ್ಟಿಕೊಂಡಿದ್ದ ದುಬಾರಿ ಬೆಲೆಯ ಕೈಗಡಿಯಾರ ಎನ್ನುವುದೊಂದು ವಿಶೇಷ.
ಕೈಗಡಿಯಾರ ಎಂದ ಕೂಡಲೇ ಸಿದ್ದರಾಮಯ್ಯನವರ ಕಳೆದ ಅವಧಿಯಲ್ಲಿ ಭಾರಿ ವಿವಾದಕ್ಕೊಳಗಾಗಿದ್ದ 75 ಲಕ್ಷ ರೂ. ಬೆಲೆಯ ಹ್ಯೂಬ್ಲೋಟ್ ಕೈಗಡಿಯಾರದ ವಿವಾದ ನೆನಪಾಗುವುದು ಸಹಜ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸಾಕಷ್ಟು ಕಳಂಕ ಬಳಿಸಿಕೊಂಡಿದ್ದರು. ಇದೀಗ ಮತ್ತೆ ಇದೇ ಮಾದರಿಯ ವಿವಾದವೊಂದು ಅವರನ್ನು ಸುತ್ತಿಕೊಳ್ಳುವ ಲಕ್ಷಣ ಕಾಣಿಸುತ್ತಿದೆ.
ಬ್ರೇಕ್ ಫಾಸ್ಟ್ ವೇಳೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರ್ಟಿಯರ್ ಎನ್ನುವ ಕಂಪನಿಯ ವಾಚ್ ಧರಿಸಿರುವುದು ಎಲ್ಲರ ಗಮನಸೆಳೆದಿದ್ದು, ಈ ಕಾರ್ಟಿಯರ್ ವಾಚ್ನ ಮಾರುಕಟ್ಟೆ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿ ಇದೆ.
ಬ್ರೇಕ್‌ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಮಾಧ್ಯಮ ಮುಂದೆ ಬಂದಾಗ ಈ ಒಂದೇ ರೀತಿ ವಾಚ್ ಕಟ್ಟಿದ್ದು, ಫೋಟೋನಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಬ್ರೇಕ್‌ಫಾಸ್ಟ್ ಮಾತ್ರವಲ್ಲದೆ ಒಂದೇ ಕಂಪನಿಯ ವಾಚ್ ಕಟ್ಟುವ ಮೂಲಕ ನಾವಿಬ್ಬರು ಒಂದೇ ಎನ್ನುವ ಸಂದೇಶ ರವಾನಿಸಿದರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಇದರ ಬೆಲೆ, ಈ ವಾಚ್ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿ ಎಂಬ ಅಂಶ ಜನರು ಹುಬ್ಬೇರಿಸುವಂತೆ ಮಾಡಿದೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ವಾಚ್ ವಿಚಾರ ಸಾಕಷ್ಟು ವೈರಲ್ ಆಗಿದೆ. ಅನೇಕ ಮಂದಿ ಸಮಾಜವಾದಿ ಎಂದು ತನ್ನನ್ನು ತಾನೇ ಘೋಷಿಸಿಕೊಂಡಿರುವ ಸಿದ್ದರಾಮಯ್ಯನವರ ಅಸಲಿ ಮುಖ ಇದು ಎಂದು ಟೀಕಿಸಿದ್ದಾರೆ. ಅನೇಕ ಮಂದಿ ಹಿಂದಿನ ಅವಧಿಯ ಹ್ಯೂಬ್ಲೋಟ್ ಹಗರಣವನ್ನು ನೆನಪಿಸಿಕೊಂಡು ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಸಿಎಂ ಸಮಾಜವಾದಿಯಲ್ಲ ಮಜಾವಾದಿ ಎಂಬ ಟೀಕೆಯೂ ಕೇಳಿಬಂದಿದೆ.
ಕಾರ್ಟಿಯರ್ ಅತ್ಯಂತ ಲಕ್ಸುರಿ ವಾಚ್ ಬ್ರ್ಯಾಂಡ್ ಆಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕ್ರಿಸ್ಟಲ್ ಆ್ಯಂಟಿ ರಿಫ್ಲೆಕ್ಟಿವ್ ಗ್ಲಾಸ್ ಹೊಂದಿದ್ದು, ವಾಟರ್ ಪ್ರೂಫ್ ಆಗಿದೆ. ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಈ ವಾಚ್‌ಗೆ 8 ವರ್ಷದ ವಾರಂಟಿ ಇದ್ದು, ವಾರಂಟಿ ಸಮಯದಲ್ಲಿ ವಾಚ್‌ಗೆ ಏನಾದರೂ ಆದರೆ ರಿಪ್ಲೇಸ್ ಇರುತ್ತೆ. ಹಾಗೇ ಸರ್ವೀಸ್ ಕೂಡ ಕಾಂಪ್ಲಿಮೆಂಟರಿ ಆಗಿರುತ್ತದೆ.
ಈ ಅತ್ಯಧುನಿಕ ವಾಚ್ ಅನ್ನು ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರೆಟಿಗಳು ಬಳಕೆ ಮಾಡುತ್ತಾರೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಾಚ್ ಧರಿಸುತ್ತಾರೆ. ವಿಶೇಷವಾಗಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಹೆಚ್ಚಾಗಿ ಈ ವಾಚ್ ಬಳಕೆ ಮಾಡುತ್ತದೆ. ಈ ಪೈಕಿ ಪ್ರಿನ್ಸ್ ಡಯಾನ ಬಳಿ ಕಾರ್ಟಿಯರ್ ಬ್ರ್ಯಾಂಡ್ನ ಬಹುತೇಕ ಎಲ್ಲಾ ಮಾಡೆಲ್ ವಾಚ್‌ಗಳಿದ್ದವು.
ಕಾಲೆಳೆದ ಬಿಜೆಪಿ
2016ರಲ್ಲಿ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್‌ನಂತೆ ಇದೀಗ ಕಾರ್ಟಿಯರ್ ವಾಚ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ 43 ಲಕ್ಷ ರೂ. ಬೆಲೆ ಬಾಳುವ ಕಾರ್ಟಿಯರ್ ವಾಚ್ ಕಟ್ಟಿದ್ದೀರಿ. ರಾಜ್ಯಕ್ಕೆ ಯಾವ ಮಹತ್ತರ ಉಪಕಾರ ಮಾಡಿದಿರಿ ಎಂದು ನಿಮಗೆ ಈ ಲಕ್ಷ ಬೆಲೆ ಬಾಳುವ ಕಾರ್ಟಿಯರ್ ವಾಚ್ ಉಡುಗೊರೆಯಾಗಿ ಬಂದಿದೆ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವ ಕನ್ನಡಿಗರು ಎಂದು ಪ್ರಶ್ನಿಸಿದೆ.
























