ಆರು ಮಂದಿಯ ವಿರುದ್ಧ ಎಸ್‌ಐಟಿ ಸಲ್ಲಿಸಿರುವ ವರದಿ
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ಆರು ಮಂದಿಯ ವಿರುದ್ಧ ಸಲ್ಲಿಸಿರುವ ವರದಿಯ ಬಗ್ಗೆ ಬೆಳ್ತಂಗಡಿ ನ್ಯಾಯಾಲಯ ವಿಚಾರಣೆ ನಡೆಸಿ ಮುಂದಿನ ಶನಿವಾರಕ್ಕೆ ವಿಚಾರಣೆ ಮುಂದೂಡಿದೆ. ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ನ.20ರಂದು ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ, ಸುಜಾತ ಭಟ್ ವಿರುದ್ಧ 3,923 ಪುಟಗಳ ವರದಿಯನ್ನು ಸಲ್ಲಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್ ಅವರ ಮುಂದೆ ಡಿ.2ರಂದು ಎಸ್ಐಟಿ ಪರ ಸರ್ಕಾರಿ ವಕೀಲ ದಿವ್ಯರಾಜ್ ವಾದ ಮಂಡಿಸಿದರು. 39/2025 ಅಪರಾಧ ಪ್ರಕರಣದಲ್ಲಿ ತನಿಖೆ ಮುಗಿಯದ ಕಾರಣದಿಂದ ಚಾರ್ಜ್‌ಶೀಟ್ ಬದಲು BNS u/s 215 ಅಡಿಯಲ್ಲಿ ವರದಿ ನೀಡಿದ್ದು, ಈ ವರದಿಯಲ್ಲಿ ಎಸ್.ಐ.ಟಿ ಅಧಿಕಾರಿಗಳು ಆರೋಪಿಗಳ ವಿರುದ್ದ ಎಫ್ಎಸ್ಎಲ್ ವರದಿ ಮತ್ತು ಇತರ ದಾಖಲೆಗಳ ಮೂಲಕ ವಿವರಿಸಲಾಗಿದೆ. ಇದರಿಂದ ನ್ಯಾಯಾಲಯ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ಹಲವು ಅಂಶಗಳನ್ನು ಮುಂದಿಟ್ಟು ನ್ಯಾಯಾಲಯಕ್ಕೆ ವಿವರಿಸಿದರು. ಬಳಿಕ ಸರ್ಕಾರಿ ವಕೀಲರು ಮುಂದಿನ ವಿಚಾರಣೆಗೆ ಸಮಯಾವಕಾಶ ಕೇಳಿದ್ದು ನ್ಯಾಯಲಯ ಮುಂದಿನ ಡಿ.6ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಾಥಮಿಕ ವರದಿಯನ್ನು ಕೇಳಿ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ದಾಖಲೆ ನೀಡಲು ಸಮ್ಮತಿಸಿದೆ. ಆರೋಪಿ ಎಂದು ತನಗೆ ನೊಟೀಸ್ ನೀಡಿರುವ ಹಿನ್ನಲೆಯಲ್ಲಿ ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ನೀಡುವಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಜಯಂತ್ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಎಸ್.ಐ.ಟಿ ವರದಿಯನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿರುವ ಕಾರಣದಿಂದ ಈ ವರದಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಈ ಹಿನ್ನಲೆಯಲ್ಲಿ ಬೆಂಗಳೂರಿನ ಹಿರಿಯ ವಕೀಲ ಪ್ರಕರಣದ ಬಗ್ಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಜಯಂತ್ ಟಿ ಪರವಾಗಿ ವಕಾಲತು ಸಲ್ಲಿಸಿದ್ದು ಎಸ್.ಐ.ಟಿ ಸಲ್ಲಿಸಿದ್ದ ವರದಿಯನ್ನು ನೀಡುವಂತೆ ವಿನಂತಿಸಿದ್ದರು. ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದ ವಕೀಲ ಎಸ್.ಐ.ಟಿ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ, ಚಿನ್ನಯ್ಯ ಹಾಗೂ ಜಯಂತ್ ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದಿರುವುದು ಯಾವುದೋ ದುರುದ್ದೇಶದಿಂದ ಅಲ್ಲ ಸದುದ್ದೇಶದಿಂದಲೇ. ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಗಮನ ಸೆಳೆಯಲು ಬಂಗ್ಲೆಗುಡ್ಡದ ಕಾಡಿನಿಂದ ಈ ತಲೆ ಬುರುಡೆಯನ್ನು ತಂದಿದ್ದಾರೆ. ಅದಕ್ಕಾಗಿ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಜಯಂತ್ ಅವರಿಗೆ 9 ನೊಟೀಸ್ ಗಳನ್ನು ನೀಡಲಾಗಿದ್ದು ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಹೇಳಿದ್ದಾರೆ. ಹೀಗರುವಾಗ ಅವರ ವಿರುದ್ಧ ಸಲ್ಲಿಕೆಯಾಗಿರುವ ವರದಿಯನ್ನು ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ ಎಂದು ವಾದಿಸಿದ್ದಾರೆ.
























