ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಪುತ್ತೂರೊಡೆಯನಿಗೆ ಕಾಣಿಕೆ ಸಮರ್ಪಣೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ವತಿಯಿಂದ ಬೆಲ್ಲ, ಅಕ್ಕಿ, ಕಡ್ಲೆ ಬೇಳೆ, ತೊಗರಿ ಬೇಳೆ ನೀಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಹರಿಪ್ರಸಾದ್ ನೆಲ್ಲಿಕಟ್ಟೆ ಅವರು ಮಾತನಾಡಿ, ಕೆಲವು ಲೋಪ ದೋಷಗಳು ಕಂಡು ಬಂದಾಗ ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಾ ಬಂದೆವು. ಅವೆಲ್ಲವೂ ದೇವರ ಕೃಪೆಯಿಂದ ಸರಿಯಾಗುತ್ತಾ ಬಂತು. ಹಾಗೆಯೇ ಸಮಿತಿಯ ವತಿಯಿಂದ ದೇವರಿಗೆ ಕಾಣಿಕೆ ಸಲ್ಲಿಸುವ ಸಂಕಲ್ಪ ಮಾಡಿದೆವು. ಅದರಂತೆ ಈಗ ಮೂರನೇ ಬಾರಿಗೆ ಕಾಣಿಕೆ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅನಿಲ್ ಕುಮಾರ್ ಕನ್ನಾರ್ನೂಜಿ ಅವರು ಮಾತನಾಡಿ, ದೇಗುಲದ ಪಾವಿತ್ರ್ಯತೆ ಉಳಿಸುವ ನಿಟ್ಟಿನಲ್ಲಿ ಸ್ಥಾಪಿತವಾದ ಸಮಿತಿ ಇದು. ಅಲ್ಲದೆ ಯಾವುದೇ ರಾಜಕೀಯ, ಆಡಳಿತ ಸಮಿತಿಯ ವಿರುದ್ಧ ಇರುವುದಲ್ಲ. ಲೋಪಗಳು ಕಂಡಾಗ ಆ ಬಗ್ಗೆ ಮನವಿ‌ ಮಾಡಿದ್ದೇವೆ. ವ್ಯವಸ್ಥೆಗಳು ಸರಿಯಾಗುತ್ತಿವೆ. ಈ ನಿಟ್ಟಿನಲ್ಲಿ ಭಕ್ತರೇ ಸೇರಿಕೊಂಡು ಕಾಣಿಕೆ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.





















































 
 

ಸಮಿತಿಯ ಬಾಲಚಂದ್ರ ಸೊರಕೆ ಮಾತನಾಡಿ, ವೈಯಕ್ತಿಕವಾಗಿ 2014 ರಿಂದಲೇ ಮನವಿ ನೀಡುತ್ತಾ ದೇವಾಲಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಅದೇ ಕೆಲಸವನ್ನು ಕಳೆದೊಂದು ‌ವರ್ಷದಿಂದ ಸಮಿತಿಯ ಮೂಲಕ ನಡೆಸಿಕೊಂಡು ಬರುತ್ತಿದ್ದೇವೆ. ಈ ಮೊದಲು ದೇವಾಲಯದ ಅಂಗಣಕ್ಕೆ ಚಪ್ಪಲಿ ಹಾಕಿಕೊಂಡು ಬರುತ್ತಿದ್ದರು. ಈಗ ಅದು ಕಡಿಮೆಯಾಗಿದೆ. ವ್ಯವಸ್ಥಾಪನಾ ಸಮಿತಿಯ ಈಗಿನ ಅಧ್ಯಕ್ಷರ ಕಾರ್ಯ ವೈಖರಿ ಚೆನ್ನಾಗಿದೆ ಎಂದು ಅವರು ನುಡಿದಿದ್ದಾರೆ.

ಮೊದಲ ಬಾರಿ ಒಂದು ಕ್ವಿಂಟಾಲ್ ಅಕ್ಕಿ, ಎರಡನೇ ಬಾರಿ ಎರಡು ಕ್ವಿಂಟಾಲ್ ಅಕ್ಕಿ, ಇದೀಗ ಮೂರನೇ ಬಾರಿ 2.51 ಕ್ವಿಂಟಾಲ್ ಅಕ್ಕಿ ನೀಡಿದ್ದೇವೆ. 60 ಕೆಜಿ ತೊಗರಿಬೇಳೆ, 60 ಕೆಜಿ ಕಡ್ಲೆಬೇಳೆ, 1 ಕ್ವಿಂಟಾಲ್ ಬೆಲ್ಲ. ಇದು ಭಕ್ತರು ನೀಡಿದ ಹಣವನ್ನು ಒಟ್ಟುಗೂಡಿಸಿ ನೀಡಲಾಗುತ್ತಿದೆ ಎಂದಿದ್ದಾರೆ.

ಈ ವೇಳೆ ಸಮಿತಿಯ ಪದ್ಮನಾಭ, ರಾಜೇಶ್ ಸೌಪರ್ಣಿಕಾ, ಜಯರಾಮ ರೈ, ಚಂದ್ರ, ಮನೋಹ‌ರ್ ಶೆಟ್ಟಿ ಪಡೀಲ್, ಸಂದೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಉಪಸ್ಥಿತಿಯಲ್ಲಿ ದೇವರ ನಡೆಯಲ್ಲಿ ಪ್ರಧಾನ ಅರ್ಚಕ ವಿ.ಎಸ್. ಭಟ್ ಪ್ರಾರ್ಥನೆ ಸಲ್ಲಿಸಿದರು.

error: Content is protected !!
Scroll to Top