ಕಾಂತಾರ ಹೊಗಳುವ ಭರದಲ್ಲಿ ದೈವವನ್ನು ಅಣಕಿಸಿದ್ದ ಬಾಲಿವುಡ್ ನಟ
ಮುಂಬೈ : ಕಾಂತಾರ ಚಿತ್ರವನ್ನು ಹೊಗಳುವ ಭರದಲ್ಲಿ ದೈವಕ್ಕೆ ಅಪಚಾರ ಮಾಡಿ ಆಕ್ರೋಶಕ್ಕೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ತನ್ನ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ತಾನು ನಟಿಸಿದ ‘ಧುರಂಧರ್’ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಈ ಅನಪೇಕ್ಷಿತ ವಿವಾದ ಭುಗಿಲೆದದ್ದು ಅವರಿಗೆ ಹಿನ್ನಡೆಯಾಗಿತ್ತು. ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಕಾಂತಾರ’ ಚಿತ್ರ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಅವರು ದೈವವನ್ನು ದೆವ್ವ ಎಂದು ಕರೆದಿದ್ದರು ಮಾತ್ರವಲ್ಲದೆ ರಿಷಬ್ ಶೆಟ್ಟಿಯವರ ಅಭಿನಯವನ್ನು ನಕಲು ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಇದರಿಂದ ತುಳುನಾಡಿನ ದೈವಾರಾಧಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ನಟನಿಂದ ತುಳುನಾಡಿನ ಸಂಸ್ಕೃತಿಗೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ರಣವೀರ್ ಸಿಂಗ್ ವಿರುದ್ಧ ಅನೇಕರು ಪೋಸ್ಟ್ಗಳನ್ನು ಮಾಡಿದ್ದರು. ಈ ವಿಷಯದಲ್ಲಿ ರಣವೀರ್ ಸಿಂಗ್ ಬೇಷರತ್ ಕ್ಷಮೆ ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ಕೊನೆ ಹಾಡುವ ಪ್ರಯತ್ನ ಮಾಡಿದ್ದಾರೆ.
ರಣವೀರ್ ಅವರು ನಡೆದುಕೊಂಡ ರೀತಿಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಈಗ ರಣವೀರ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡಿ, ಕ್ಷಮೆ ಕೇಳಿ ಪೋಸ್ಟ್ ಒಂದನ್ನು ಹಂಚಿಕೊಂಡು ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ ಎಂದಿದ್ದಾರೆ ರಣವೀರ್ ಸಿಂಗ್.
ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದ್ದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ರಣವೀರ್ ಬರೆದುಕೊಂಡಿದ್ದಾರೆ.
























