ಇನ್ನು ನೋಂದಣಿ, ಕರಾರುಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ

ಛಾಪಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ

ಬೆಂಗಳೂರು : ಆಸ್ತಿ ನೋಂದಣಿ, ಒಪ್ಪಂದದಂಥ ಪ್ರಮುಖ ಕಾರ್ಯಗಳಿಗೆ ಬಳಕೆಯಾಗುವ ಛಾಪಾ ಕಾಗದ ವ್ಯವಸ್ಥೆಗೆ ಸರ್ಕಾರ ಆಮೂಲಾಗ್ರ ಬದಲಾವಣೆ ಮಾಡಿದೆ. ಈಗ ಇ-ಸ್ಟ್ಯಾಂಪಿಂಗ್‌ ವ್ಯವಸ್ಥೆ ಬದಲಾಗಿ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ತಂದಿದೆ. ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ ಜಾರಿಗೆ ಬಂದಿದೆ. ಇ-ಸ್ಟ್ಯಾಂಪ್ ಬದಲು ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಆದರೆ ಜನರಲ್ಲಿ ಅರಿವು ಮೂಡುವವರೆಗೆ ಹಳೆಯ ಇ-ಸ್ಟ್ಯಾಂಪ್ ಬಳಕೆಯಲ್ಲಿರುತ್ತೆ. ಈ ಬಗ್ಗೆ ಸ್ವತಃ ಕಂದಾಯ ಸಚಿವ ಕೃಷ್ಣಬೈರೇ ಗೌಡ ಮಾಹಿತಿ ನೀಡಿದ್ದಾರೆ.

ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್‌ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ-ಸ್ಟ್ಯಾಂಪ್‌ಗೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ ಎಂದು ತಿಳಿಸಿದ್ದಾರೆ.





















































 
 

ಇನ್ನು ಮಂದೆ ಇ-ಸ್ಟ್ಯಾಂಪ್‌ ಬದಲಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವಿತರಿಸಲಾಗುತ್ತದೆ. ಸ್ಟಾಂಪಿಂಗ್‌ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್‌ ಕೊಟ್ಟು ಉಪನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೂ ಡಿಜಿಟಲ್ ಇ-ಸ್ಟ್ಯಾಂಪ್‌ ಅನ್ವಯಿಸಲಿದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್‌ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು.

ಎಲ್ಲ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದೆ. ನಂಬರ್, ಕ್ಯೂ ಆರ್ ಕೋಡ್ ಇರುತ್ತದೆ. ಡಿಜಿಟಲ್ ಛಾಪಾ ಕಾಗದದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ.

ಛಾಪಾ ಕಾಗದ ಹಿಂದೆ ದೊಡ್ಡ‌ ಹಗರಣವಾಗಿತ್ತು. ಹೀಗಾಗಿ ಇ-ಸ್ಟ್ಯಾಂಪ್ ಚಲಾವಣೆಗೆ ಬಂತು. ಇ-ಸ್ಟ್ಯಾಂಪ್‌ನಲ್ಲೂ ದುರುಪಯೋಗ ಕಂಡುಬಂದಿದೆ. ಕಳೆದ ಎರಡು ವರ್ಷಗಳಿಂದ ಯಾವ ರೀತಿ ದುರುಪಯೋಗ ಆಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಕಲರ್ ಜೆರಾಕ್ಸ್‌, ಕಲರ್ ಪ್ರಿಂಟ್ ಮೂಲಕ ದುರುಪಯೋಗ ಮಾಡಲಾಗುತ್ತಿದೆ. ಛಾಪಾ ಕಾಗದವನ್ನ ಸುಮಾರು 54 ವಿಷಯಕ್ಕೆ ಬಳಸಲಾಗುತ್ತಿದೆ. ಕೆಲ ಛಾಪಾ ಕಾಗದಕ್ಕೆ 100ರೂ., 500 ರೂ. ಹಾಗೆ ಸ್ವತ್ತಿನ ಮೌಲ್ಯ ಇರುತ್ತದೆ. ಇದರಲ್ಲಿ‌ 100 ರೂ.‌ ಇ-ಸ್ಟ್ಯಾಂಪ್ ತಗೊಂಡು 1 ಸಾವಿರ ರೂ. ಮೌಲ್ಯದ ಕೆಲಸಗಳಿಗೆ ಬಳಕೆ ಆಗುತ್ತಿದೆ. ಈ ರೀತಿಯ ದುರುಪಯೋಗಕ್ಕೆ‌ ಕಡಿವಾಣ ಹಾಕಬೇಕಿದೆ.

error: Content is protected !!
Scroll to Top