ಫ್ರಾಂಚೈಸಿ ಕೊಡುವ ನೆಪದಲ್ಲಿ ಉದ್ಯಮಿಗೆ ವಂಚಿದ್ದ ಚೋರರು
ಉಡುಪಿ: ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 6,15,000 ರೂ. ಮೌಲ್ಯದ ನಗದು, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ಪಾಟ್ನಾ ಜಿಲ್ಲೆಯ ದೇವ್ ಹರ್ಷ(20) ಹಾಗೂ ಬಿಹಾರ ನಳಂದಾ ಜಿಲ್ಲೆಯ ಚಂದನ ಕುಮಾರ್(29) ಬಂಧಿತ ಆರೋಪಿಗಳು. ಇವರಿಂದ 97 ಸಾವಿರ ರೂ. ಮೌಲ್ಯದ 10 ಮೊಬೈಲ್ ಫೋನ್, 68,000 ರೂ. ಮೌಲ್ಯದ 4 ಲ್ಯಾಪ್‌ಟಾಪ್ ಹಾಗೂ 4,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅವಿನಾಶ್ ಎಂಬವರು ರಿಲಯನ್ಸ್ ಇಂಡಸ್ಟ್ರಿ ಮಾಲಕತ್ವದ ಕ್ಯಾಂಪಾ ಕೋಲಾ ಪ್ರಾಂಚೈಸ್‌ಗೆ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿದ್ದು, ಕೆಲವು ದಿನಗಳಲ್ಲಿ ಅವಿನಾಶ್‌ಗೆ ಮೇಲ್ ಹಾಗೂ ಪೋನ್ ಮೂಲಕ ಹೆಚ್ಚಿನ ಮಾಹಿತಿಗಾಗಿ ಹಾಗೂ ದಾಖಲಾತಿಗಾಗಿ ಕರೆ ಬಂದಿತ್ತು.
ಅವಿನಾಶ್ ವಿದ್ಯಾಭ್ಯಾಸ, ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಕಳುಹಿಸಿದ್ದರು. ಆಗ ಅವರು ಪ್ರಾಂಚೈಸಿಗೆ ಅರ್ಜಿ ಸಲ್ಲಿಕೆ ಆಗಿರುವುದಾಗಿ ತಿಳಿಸಿದ್ದು, ಆರೋಪಿಗಳು ತಿಳಿಸಿದಂತೆ ಅವಿನಾಶ್ ರಿಜಿಸ್ಟ್ರೇಷನ್, ಪ್ರೊಡಕ್ಟ್ ಬುಕಿಂಗ್‌ಗೆ ಹಂತ ಹಂತವಾಗಿ 5,72,500 ರೂ. ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರು. ಆರೋಪಿತರು ಮತ್ತೆ ಮತ್ತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದು, ಇದರಿಂದ ಅವಿನಾಶ್‌ಗೆ ಸಂಶಯ ಉಂಟಾಯಿತು. ಆರೋಪಿಗಳು ಕ್ಯಾಂಪಾ ಕೋಲಾ ಪ್ರಾಂಚೈಸಿಯನ್ನು ಕೊಡುವುದಾಗಿ ನಂಬಿಸಿ ಒಟ್ಟು 5,72,500 ರೂ. ಪಡೆದುಕೊಂಡು ವಂಚಿಸಿರುವುದಾಗಿ ಅವಿನಾಶ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ತಂಡ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
























