ಟೆರರ್‌ ಡಾಕ್ಟರ್‌ ಶಾಹಿನಾ ಕೊಠಡಿಯಲ್ಲಿ ಲಕ್ಷಗಟ್ಟಲೆ ಹಣ ಪತ್ತೆ

ಅಲ್‌-ಫಲಾಹ್‌ ವಿವಿಯ ಕೊಠಡಿಯಲ್ಲೇ ಕಂತೆ ಕಂತೆ ಹಣ ಸಂಗ್ರಹಿಸಿಟ್ಟಿದ್ದ ಶಾಹಿನಾ

ನವದೆಹಲಿ: ದೆಹಲಿ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಅಲ್-ಫಲಾಹ್ ವಿಶ್ವವಿದ್ಯಾಲಯದ ಟೆರರ್‌ ಡಾಕ್ಟರ್‌ ಶಾಹಿನಾ ಸಯೀದ್‌ ಕೊಠಡಿಯಲ್ಲಿ 18 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ವಿಶ್ವವಿದ್ಯಾಲಯದ ರೂಮ್‌ ನಂಬರ್‌ 22ರಲ್ಲಿ ಶೋಧ ನಡೆಸಿದಾಗ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಇಟ್ಟಿದ್ದ ಹಣ ಪತ್ತೆಯಾಗಿದೆ.

ಶಾಹಿನಾಗೆ ಈ ಪ್ರಮಾಣದ ಹಣ ಎಲ್ಲಿಂದ ಸಿಕ್ಕಿದೆ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಈಕೆ ಪ್ರಮುಖ ಆರೋಪಿಯಾಗಿದ್ದಾಳೆ. ಈ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿ, ಹಲವಾರು ಜನ ಗಾಯಗೊಂಡಿದ್ದರು. ದೆಹಲಿ ಸ್ಫೋಟ ಪ್ರಕರಣದ ಸಹ ಆರೋಪಿಗಳಾದ ಶಹಿನಾ ಸಯೀದ್ ಮತ್ತು ಮುಜಮ್ಮಿಲ್ ಶಕೀಲ್ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು ಖರೀದಿಸಿದ್ದಾಗ ನಗದು ಹಣ ಪಾವತಿಸಿದ್ದರು. HR 87U 9988 ಎಂದು ನೋಂದಾಯಿಸಲಾದ ಬ್ರೆಝಾ ಕಾರನ್ನು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ನಿಲ್ಲಿಸಲಾಗಿತ್ತು. ಸ್ಫೋಟಕ ವಸ್ತುಗಳನ್ನು ಸಾಗಿಸಲು ಸಿದ್ಧಪಡಿಸಲಾಗಿದ್ದ 32 ಕಾರುಗಳಲ್ಲಿ ಇದು ಸಹ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.





















































 
 

ಎರಡು ವಿಫಲ ವೈವಾಹಿಕ ಜೀವನದ ನಂತರ ಶಾಹಿನಾ ಕಾಶ್ಮೀರಿ ವೈದ್ಯ ಡಾ.ಮುಜಮ್ಮಿಲ್ ಶಕೀಲ್‌ನನ್ನು ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿದ್ದು, ದಿನಕಳೆದಂತೆ ಇಬ್ಬರ ಬಾಂಧವ್ಯ ವೃದ್ಧಿಯಾಗಿತ್ತು. ಇಬ್ಬರು ಸೆಪ್ಟೆಂಬರ್ 2023ರಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಳಿಯ ಮಸೀದಿಯಲ್ಲಿ ವಿವಾಹವಾಗಿದ್ದರು. ಈ ವೇಳೆ ವರನಿಂದ ವಧುವಿಗೆ ಇಸ್ಲಾಮಿಕ್ ವಿವಾಹದಲ್ಲಿ ಕಡ್ಡಾಯ ಉಡುಗೊರೆಯಾಗಿ 6,000 ರೂ.ಗಳನ್ನು ನೀಡಲಾಗಿತ್ತು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.

ದಂಪತಿ ವಿದ್ಯಾರ್ಥಿ ಗುಂಪುಗಳನ್ನು ಪರಿಚಯ ಮಾಡಿಕೊಂಡು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದರು. ಈ ಸಭೆಗಳ ಸಮಯದಲ್ಲಿ, ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್ ಸದಸ್ಯರು ಅವಳನ್ನು ಸಂಪರ್ಕಿಸಿದ್ದರು. ಬಳಿಕ ತನ್ನ ವೈದ್ಯಕೀಯ ವೃತ್ತಿಯನ್ನೇ ಬಳಸಿಕೊಂಡು ಶಾಹಿನಾ ಜಮ್ಮು ಮತ್ತು ಕಾಶ್ಮೀರ, ದೆಹಲಿ-ಎನ್‌ಸಿಆರ್ ಮತ್ತು ಹರಿಯಾಣಕ್ಕೆ ಸಂಚಾರ ಮಾಡುತ್ತಿದ್ದಳು. ಈ ಮೂಲಕ ಹಣ ವರ್ಗಾವಣೆ ಮತ್ತು ಸಂದೇಶಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಳು.

ಪಾಕಿಸ್ತಾನದ ಉಗ್ರ ಸಂಘಟನೆ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜಮಾತ್ ಉಲ್-ಮೊಮಿನಾತ್‌ನ ಭಾರತೀಯ ಶಾಖೆಯ ಉಸ್ತುವಾರಿಯನ್ನು ಶಾಹಿನಾಗೆ ವಹಿಸಲಾಗಿತ್ತು ಎಂದು ಆರೋಪಿಸಲಾಗಿದೆ.

error: Content is protected !!
Scroll to Top