ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ

ವಿಕಸಿತ ಭಾರತ ಸಂಕಲ್ಪ ಪೂರ್ಣವಾಗಲು ಜನರಿಗೆ 9 ಕರ್ತವ್ಯ ತಿಳಿಸಿದ ಮೋದಿ

ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎಂದು ಪ್ರಶಂಸೆ

ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಎಂದು ಬಣ್ಣಿಸಿದ ಮೋದಿ





















































 
 

ಉಡುಪಿ: ಜನರು 9 ಬಗೆಯ ಕರ್ತವ್ಯ ನಿರ್ವಹಿಸಿದರೆ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಿದೆ. ಲಕ್ಷ ಕಂಠ ಗೀತ ಗಾಯನ ಅತ್ಯುತ್ತಮ ಕಾರ್ಯಕ್ರಮ, ಅದರಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ ಸಾಧ್ಯ. ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉಡುಪಿಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಮಾತನಾಡಿದ ಅವರು, ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟಮಠಗಳು ಧರ್ಮ‌ಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತ ಎಲ್ಲ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.

ನನ್ನ ಜನ್ಮ‌ ಗುಜರಾತ್‌ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ‌ ನೀಡಿದೆ. ಉಡುಪಿ‌ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ ಎಂದರು.

ಉತ್ತಮ ಆಡಳಿತಕ್ಕೆ ಉಡುಪಿ ಮಾದರಿ. 1968ರಲ್ಲಿಯೇ ಉಡುಪಿ ಜನತೆ ಜನಸಂಘಕ್ಕೆ ಆಶೀರ್ವದಿಸಿದೆ. ಸ್ವಚತಾ ಕಾರ್ಯವನ್ನೂ ಉಡುಪಿ 4 ದಶಕದ ಹಿಂದೆಯೇ ಸಮಗ್ರವಾಗಿ ಅಳವಡಿಸಿಕೊಂಡಿದೆ. ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎದರು.

ಪಹಲ್ಗಾಮ್‌ನಲ್ಲಿ ಕನ್ನಡಿಗರು ಪ್ರಾಣ ತೆತ್ತರು. ನವಭಾರತ ಯಾರ ಮುಂದೆಯೂ ತಲೆಬಾಗಲ್ಲ. ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದರು ಮೋದಿ.

ಭಗವದ್ಗೀತೆ ಪಠಣ

ಉಡುಪಿಯ ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದ್ಗೀತೆಯ ಶ್ಲೋಕ ಪಠಿಸಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ದನಿಗೂಡಿಸಿದರು.

ರೋಡ್ ಶೋ ಮುಗಿಸಿ ದೇವರ ದರ್ಶನ ಪಡೆದು ಮಧ್ಯಾಹ್ನ 12.15ರ ಸುಮಾರಿಗೆ ವೇದಿಕೆ ಬಳಿಗೆ ಬಂದ ಪ್ರಧಾನಿ ʻಪುರುಷೋತ್ತಮ ಯೋಗʼ ಎನ್ನುವ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕ ಪಠಿಸಿ, ಕೃಷ್ಣನನ್ನು ನೆನೆದರು. ಭಗವದ್ಗೀತೆ ಸಮಾವೇಶದಲ್ಲಿ ಸುಮಾರು 18 ಸಾವಿರ ಭಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಸಂಸದ ರಾಘವೇಂದ್ರ, ಶಾಸಕರಾದ ಸುನೀಲ್ ಕುಮಾರ್ ಮತ್ತು ಯಶ್‌ಪಾಲ್ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಷ್ಣಮಠದಲ್ಲಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ

ಇದಕ್ಕೂ ಮುನ್ನ ಕೃಷ್ಣ ಮಠದಿಂದ ಗೀತಾ ಮಂದಿರಕ್ಕೆ ತೆರಳಿದ ಕೃಷ್ಣಮಠದ ಐವರು ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.

ಮಾಧ್ವ ಸಂಪ್ರದಾಯದ ತಿಲಕ

ಇದಾದ ಬಳಿಕ ಸ್ವಾಮೀಜಿಗಳು ಪ್ರಧಾನಿ ಮೋದಿ ಹಣೆಗೆ ತಿಲಕವಿಟ್ಟು ತುಳಸಿಮಣಿ ನೀಡಿದರು. ಬಳಿಕ ಕನಕದಾಸರ ವಿಗ್ರಹಕ್ಕೆ ಮೋದಿ ಹೂಮಾಲೆ ಅರ್ಪಿಸಿದರು. ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕರಿಸಿದರು. ಇದೇ ವೇಳೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದರು. ನಂತರ ಮೋದಿಗೆ ಅಂಗಾರಕ ಅಕ್ಷತೆ ನೀಡಿ ಮಾಧ್ವ ಸಂಪ್ರದಾಯದ ತಿಲಕ ಹಚ್ಚಲಾಯಿತು.

error: Content is protected !!
Scroll to Top