ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ

ಕನ್ನಡದಲ್ಲೇ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡ ಪ್ರಧಾನಿ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಶ್ರೀಕೃಷ್ಣ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು, ಇದಕ್ಕೂ ಮೊದಲು ಉಡುಪಿಯಲ್ಲಿ ರೋಡ್‌ಶೋ ನಡೆಯಲಿದೆ. ಜನರು ಮುಂಜಾನೆಯಿಂದಲೇ ಉಡುಪಿಯತ್ತ ಹೋಗಲಾರಂಭಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಹ ಉಡುಪಿಯ ಭೇಟಿಗೆ ಕಾತರರಾಗಿದ್ದು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಕನ್ನಡಡದಲ್ಲಿ ಬರೆದುಕೊಂಡಿದ್ದಾರೆ.





















































 
 

ಮೋದಿಯವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮಠಕ್ಕೆ ಆಗಮಿಸಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು. ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಲಿದ್ದಾರೆ. ಇದೇ ವೇಳೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಪಡೆಯಲಿದ್ದಾರೆ.

ಪ್ರಧಾನಿಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ಕೃಷ್ಣಮಠ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪ್ರಧಾನಿ ರೋಡ್ ಶೋ ಮೂಲಕ ಆದಿ ಉಡುಪಿಯಿಂದ ಕೃಷ್ಣಮಠಕ್ಕೆ ಬರಲಿದ್ದು, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಪಡೆಯಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪರ್ಯಾಯ ಶ್ರೀಗಳು, ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಹಾರ ಸೇವಿಸುವರು. ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸಲಿದ್ದಾರೆ ತಿಳಿಸಿದರು.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 3000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 10 ಮಂದಿ ಪೊಲೀಸ್‌ ಆಯುಕ್ತರು ಸೇರಿದಂತೆ 8ಕ್ಕೂ ಹೆಚ್ಚು ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಗೆ ಎಸ್‌ಪಿಜಿ ತಂಡ ನೇತೃತ್ವ ವಹಿಸಿದ್ದು, ಈಗಾಗಲೇ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದೆ. ಸ್ಥಳೀಯ ಪೊಲೀಸ್‌ ಸಿಬ್ಬಂದಿಯೂ ಅವರೊಂದಿಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಬಂದೋಬಸ್ತ್‌ ವ್ಯವಸ್ಥೆ ಎಡಿಜಿಪಿ ಜಿತೇಂದ್ರ ಕುಮಾರ್‌ ಅವರ ಮೇಲ್ವಿಚಾರಣೆಯಲ್ಲಿ, ಐಜಿ ಸಂದೀಪ್‌ ಪಟೀಲ್‌ ಮತ್ತು ಐಜಿ ಚಂದ್ರಗುಪ್ತ ನೇತೃತ್ವದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ಹೇಳಿದರು.

ಮೋದಿ ವೇಳಾಪಟ್ಟಿ

ಪ್ರಧಾನಿ ನರೇಂದ್ರ ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಉಡುಪಿಯತ್ತ ತೆರಳುವವರು.

ಬೆಳಗ್ಗೆ 8.15: ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಮಾನದಲ್ಲಿ ಪ್ರಯಾಣ ಆರಂಭ.
ಬೆಳಗ್ಗೆ 11.05: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಗ್ಗೆ 11.10: ಹೆಲಿಕಾಪ್ಟರ್‌ ಮೂಲಕ ಉಡುಪಿಗೆ ಪ್ರಯಾಣ.
ಬೆಳಗ್ಗೆ 11.35: ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮನ.
ಬೆಳಗ್ಗೆ 11.45: ಆದಿಉಡುಪಿ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಶ್ರೀಕೃಷ್ಣ ಮಠಕ್ಕೆ ಪಯಣ.
ಮಧ್ಯಾಹ್ನ 12: ಶ್ರೀಕೃಷ್ಣ ಮಠ ಭೇಟಿ, ದೇವರ ದರ್ಶನ, ಲಕ್ಷ ಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗಿ.
ಮಧ್ಯಾಹ್ನ 12ರಿಂದ 1.30: ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಶ್ರೀ ಭೇಟಿ.
ಮಧ್ಯಾಹ್ನ 1.35: ಶ್ರೀಕೃಷ್ಣಮಠದಿಂದ ನಿರ್ಗಮನ.
ಮಧ್ಯಾಹ್ನ 1.45: ಹೆಲಿಕಾಪ್ಟರ್‌ ಮೂಲಕ ಮಂಗಳೂರು ವಿಮಾನ ನಿಲ್ದಾಣ.
2.15: ವಾಯುಪಡೆ ವಿಮಾನ ಮೂಲಕ ಗೋವಾದ ದಾಬೋಲಿಮ್‌ ವಿಮಾನ ನಿಲ್ದಾಣಕ್ಕೆ ಪಯಣ.
3.05: ದಾಬೋಲಿಂ ವಿಮಾನ ನಿಲ್ದಾಣದಿಂದ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ.

ಮಂಗಳೂರು ವಿಮಾನ ನಿಲ್ದಾಣ ಸುತ್ತಮುತ್ತ ಡ್ರೋನ್ ನಿಷೇಧ

ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಾಮುತ್ತ ಡ್ರೋನ್ ಹಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.

ಮಂಗಳೂರು ಏರ್ಪೋರ್ಟ್ ನಲ್ಲಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದ್ದು CISF ಜೊತೆ ಸ್ಥಳೀಯ ಪೊಲೀಸರ ನಿಯೋಜಿಸಲಾಗಿದೆ. ಮೋದಿ ಏರ್ಪೋರ್ಟ್​ನಿಂದ ಹೊರಗೆ ಬರದೇ ಒಳಗಿಂದಲೇ ಹೆಲಿಕಾಪ್ಟರ್ ಟೇಕಾಫ್ ಆಗುವ ರೀತಿ ವ್ಯವಸ್ಥೆ ಮಾಡಲಾಗಿದೆ. ಹೆಲಿಕಾಪ್ಟರ್​​ ವಾಪಸ್ ಏರ್‌ಪೋರ್ಟ್ ಒಳಗೆ ಲ್ಯಾಂಡಿಂಗ್ ಆಗಲಿದೆ.

error: Content is protected !!
Scroll to Top