ದಿಢೀರ್ ಏರಿಕೆಯಿಂದ ರೈತರು ಖುಷ್; ಗ್ರಾಹಕರು ಕಂಗಾಲು
ಮಂಗಳೂರು: ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್ ಆಗಿದ್ದರೆ ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ತಿಂಗಳು 20-30 ರೂ. ಇದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿ ಈಗ ಶತಕದತ್ತ ಮುನ್ನಗ್ಗುತ್ತಿದೆ. ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ತೀವ್ರ ಏರಿಕೆ ಕಂಡಿದ್ದು, 80ರಿಂದ 90 ರೂ. ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.
2 ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಚೆಲ್ಲಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ದಿಢೀರ್ ದರ ಏರಿಕೆಯಿಂದ ಕೆ.ಜಿ. ತೆಗೆದುಕೊಂಡು ಹೋಗುವವರು ಅರ್ಧ ಕೆ.ಜಿ.ಗೆ ಇಳಿಕೆ ಮಾಡಿದ್ದಾರೆ. ಕಳೆದ 8-10 ದಿನಗಳಿಂದ ಟೊಮೆಟೊ ಬೆಲೆ ಏರಿಕೆ ಆಗಿದೆ. ಹಾಪ್ಕಾಮ್ಸ್ಗಳಲ್ಲಿ ಉತ್ತಮ ದರ್ಜೆಯ ಟೊಮೆಟೊ ಪ್ರತಿ ಕೆಜಿಗೆ 80 ರೂ. ತಲುಪಿದ್ದರೆ, ತಳ್ಳುಗಾಡಿ ವ್ಯಾಪಾರಿಗಳು 80-90 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಕೆಯಾಗಿ ಟೊಮೆಟೊ ಪೂರೈಕೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ನಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ ಎನ್ನಲಾಗುತ್ತಿದೆ.
























