ರಾಜಕೀಯಕ್ಕೆ ಹೊಸ ತಿರುವು ನೀಡುತ್ತಾ ಈ ಸಂದೇಶ?
ಬೆಂಗಳೂರು : ಮುಖ್ಯಮಂತ್ರಿ ಪಟ್ಟಕ್ಕಾಗಿ ಇನ್ನಿಲ್ಲದಂತೆ ಪ್ರಯತ್ನಪಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಂದು ಪೋಸ್ಟ್ ಮಾಡಿರುವ ಸಂದೇಶವೊಂದು ಬಹಳ ಮಾರ್ಮಿಕವಾಗಿದ್ದು, ಅನೇಕ ಕಾರಣಗಳಿಗಾಗಿ ಗಮನ ಸೆಳೆದಿದೆ. ಸಂಚಲನಕ್ಕೂ ಕಾರಣವಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿ.ಕೆ ಶಿವಕುಮಾರ್ ಬರೆದುಕೊಂಡಿದ್ದಾರೆ. ವರ್ಡ್ ಪವರ್ ಈಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅವರು ಎಕ್ಸ್ ಸಂದೇಶದಲ್ಲಿ ಬರೆದಿದ್ದಾರೆ.
ಬುಧವಾರವಷ್ಟೇ ಡಿ.ಕೆ.ಶಿವಕುಮಾರ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಪ್ಲೀಸ್ ವೈಟ್’ ಎಂಬ ಸಂದೇಶ ಕಳುಹಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರದಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದವು. ಅದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಸಂದೇಶ ಪ್ರಕಟಿಸಿದ್ದಾರೆ. ಈ ಸಂದೇಶ ಯಾರನ್ನು ಉದ್ದೇಶಿಸಿದ್ದು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಮೂಲಕ ಡಿಕೆಶಿ ಹೈಕಮಾಂಡ್‌ಗೆ ನೇರ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಲಾಗುತ್ತಿದೆ.
ರಾಹುಲ್ ಗಾಂಧಿ ಜತೆ ಡಿಕೆ ಶಿವಕುಮಾರ್ ಸಹ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮಾತುಕತೆ ಗುಟ್ಟನ್ನು ಬಿಟ್ಟುಕೊಡದ ಡಿ.ಕೆ ಶಿವಕುಮಾರ್, ‘ರಾಹುಲ್ ಗಾಂಧಿಯವರು ನನ್ನೊಂದಿಗೆ ಏನು ಸಂವಹನ ಮಾಡಿದ್ದಾರೆ ಎಂಬುದು ಮಾಧ್ಯಮದಲ್ಲಿ ಮಾತನಾಡುವ ವಿಚಾರವಲ್ಲ, ಹೇಳುವ ಅವಶ್ಯಕತೆಯೂ ಇಲ್ಲ’ ಎಂದಿದ್ದಾರೆ. ಆದರೆ, ತಮ್ಮ ಗುರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 28 ಸೀಟು ಪಡೆಯುವುದು ಮತ್ತು ದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ಎರಡು ದಿನ ಹಿಂದಷ್ಟೇ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ಜೊತೆ ಮಾತುಕತೆ ನಡೆಸಿ ದೆಹಲಿಗೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂದೇಶ ಕಳುಹಿಸಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರೊಂದಿಗೆ ಸುಮಾರು 25 ನಿಮಿಷ ಕಾಲ ಮಲ್ಲಿಕಾರ್ಜುನ ಖರ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆ ನಂತರ ಮಾತನಾಡಿದ್ದ ಅವರು, ಇಲ್ಲಿನ ಸಮಸ್ಯೆಗಳಿಗೆ ಔಷಧಿ ನೀಡುತ್ತೇವೆ. ಹೈಕಮಾಂಡ್‌ನಲ್ಲಿ ನಾನಿದ್ದೇನೆ, ರಾಹುಲ್ ಗಾಂಧಿ ಇದ್ದಾರೆ, ಅಧಿನಾಯಕಿ ಸೋನಿಯಾ ಗಾಂಧಿ ಇದ್ದಾರೆ. ನಾವೆಲ್ಲ ಕುಳಿತು ಯೋಚಿಸಿ ಏನು ಪರಿಹಾರ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಮಾರ್ಮಿಕವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವುದು ಗಮನ ಸೆಳೆದಿದೆ.
























