ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಕೊಲೆ ಮಾಡಿಸಿದ್ದಾರೆ ಎಂದು ವರದಿ
ಇಸ್ಲಾಮಾಬಾದ್: ಭ್ರಷ್ಟಾಚಾರದ ಆರೋಪದಡಿ ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲೇ ನಿಗೂಢವಾಗಿ ಕೊಲೆಮಾಡಲಾಗಿದೆ ಎಂಬ ಸುದ್ದಿಯೊಂದು ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಫಘಾನಿಸ್ಥಾನದ ಮಾಧ್ಯಮಗಳಲ್ಲಿ ಇಮ್ರಾನ್ ಖಾನ್ ಕೊಲೆಯಾಗಿರುವ ಸುದ್ದಿ ಪ್ರಕಟವಾಗಿದೆ ಎನ್ನಲಾಗುತ್ತಿದೆ. ಪಾಕ್‌ನ ಸೇನಾ ದಂಡನಾಯಕ ಅಸೀಮ್ ಮುನೀರ್ ಅವರೇ ಈ ಕೊಲೆಯನ್ನು ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಇಮ್ರಾನ್ ಕೊಲೆ ಸುದ್ದಿ ಪಾಕಿಸ್ತಾನದ ಸಾಮಾಜಿಕ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಇತ್ತೀಚೆಗೆ ಅವರು ಪಾಕಿಸ್ತಾನದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಆ ಬಗ್ಗೆ ಜೈಲಿನ ಅಧಿಕಾರಿಗಳ್ಯಾರೂ ಖಚಿತಪಡಿಸಿರಲಿಲ್ಲ. ಈಗ ಅವರ ಸಾವಿನ ಸುದ್ದಿ ಪಾಕಿಸ್ತಾನದಲ್ಲಿ ಹೊಸ ತಲ್ಲಣ ಉಂಟು ಮಾಡಿದೆ.
ಕಳೆದ ಸುಮಾರು ಒಂದು ದಿನಗಳಿಂದ ಬಂಧುಗಳಿಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ನಿನ್ನೆ ಇದನ್ನು ಪ್ರತಿಭಟಿಸಿ ಬಂಧುಗಳು ದಂಗೆ ಎದ್ದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ದಮನಿಸಿದ್ದಾರೆ. ಹೀಗಾಗಿ ಇಮ್ರಾನ್ ಖಾನ್ ಕೊಲೆಯಾಗಿರುವ ವದಂತಿ ಇನ್ನಷ್ಟು ದಟ್ಟವಾಗುತ್ತಿದೆ.
ಇಮ್ರಾನ್ ಬಗ್ಗೆ ಹರಡಿರುವ ಸುದ್ದಿಗಳನ್ನು ಸತ್ಯಾಸತ್ಯತೆಯನ್ನು ತಿಳಿಯಲು ಇಮ್ರಾನ್ ಅವರ ಸೋದರಿಯರು ಇತ್ತೀಚೆಗೆ ಇಮ್ರಾನ್ ಖಾನ್ ಅವರನ್ನು ಇಟ್ಟಿರುವ ರಾವಲ್ಪಂಡಿಯ ಅದಾಲಾ ಜೈಲಿಗೆ ಭೇಟಿ ನೀಡಿದ್ದಾಗ, ಅವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಇದು ಇಮ್ರಾನ್ ಅವರ ಸಾವಿನ ಬಗ್ಗೆ ಇರುವ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (PTI) ಪಕ್ಷದ ಸದಸ್ಯರ ಪ್ರಕಾರ, ಇಮ್ರಾನ್ ಖಾನ್ ಅವರ ಸಹೋದರಿಯರಾದ ನೂರಿನ್ ನಿಜಾಮ್, ಅಲೀಮಾ ಖಾನ್ ಮತ್ತು ಡಾ. ಉಜ್ಮಾ ಖಾನ್ ಅವರು ಅದಾಲಾ ಜೈಲಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಸಹೋದರನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಅವರು ಮನವಿ ಮಾಡುತ್ತಿದ್ದರು. ಆದರೆ, ಪೊಲೀಸರು ಯಾವುದೇ ಎಚ್ಚರಿಕೆ ನೀಡದೆ, ದಿಢೀರನೆ ಬೀದಿದೀಪಗಳನ್ನು ಆಫ್ ಮಾಡಿ, ಕತ್ತಲಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೂರಿನ್ ನಿಜಾಮ್ ಆರೋಪಿಸಿದ್ದಾರೆ.
ನಾನು 71 ವರ್ಷದವಳಾಗಿದ್ದರೂ, ನನ್ನ ಕೂದಲನ್ನು ಹಿಡಿದು ಎಳೆದು, ನೆಲಕ್ಕೆ ತಳ್ಳಿ, ರಸ್ತೆಯಲ್ಲಿ ಎಳೆದೊಯ್ದರು. ಇದರಿಂದ ನನಗೆ ಗಾಯಗಳಾಗಿವೆ. ಜೈಲಿನ ಹೊರಗೆ ಇದ್ದ ಮಹಿಳೆಯರ ಮೇಲೂ ಪೊಲೀಸರುಹಲ್ಲೆ ಮಾಡಿದ್ದಾರೆ, ಎಳೆದೊಯ್ದಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪೊಲೀಸರು ನಡೆಸುತ್ತಿರುವ ಈ ಬಲಪ್ರಯೋಗ, ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಪೊಲೀಸರ ಈ ಕೃತ್ಯ ಸಂಪೂರ್ಣವಾಗಿ ಕ್ರಿಮಿನಲ್, ಅಕ್ರಮ, ನೈತಿಕವಾಗಿ ಖಂಡನೀಯ ಎಂದು ಅವರು ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿ, ಇಮ್ರಾನ್ ಅವರ ಪಕ್ಷವಾದ ಪಿಟಿಐ ಕಾರ್ಯಕರ್ತರು ಅದಾಲಾ ಜೈಲಿನ ಹೊರಗೆ ಜಮಾಯಿಸಿ, ಇಮ್ರಾನ್ ಖಾನ್ ಅವರ ಬಂಧನವನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಭೇಟಿಯಾಗಲು ಸರ್ಕಾರ ಅವಕಾಶ ನೀಡಿಲ್ಲ. ಆಗಸ್ಟ್ 2023ರಿಂದ ಇಮ್ರಾನ್ ಖಾನ್ ಅವರು ಹಲವು ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಈ ಹಿಂದೆ, ಖೈಬರ್- ಪಕ್ತುನ್‌ಖ್ವಾದ ಮುಖ್ಯಮಂತ್ರಿ ಸೋಹೈಲ್ ಆಫ್ರಿದಿ ಅವರು ಖಾನ್ ಅವರನ್ನು ಭೇಟಿಯಾಗಲು ಏಳು ಬಾರಿ ಪ್ರಯತ್ನಿಸಿದರೂ, ಜೈಲು ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ಈ ಅಧಿಕಾರಿಗಳು ಸೇನಾ ಅಧಿಕಾರಿಯೊಬ್ಬರ ನಿಯಂತ್ರಣದಲ್ಲಿದ್ದಾರೆ ಎಂದು ಖಾನ್ ಸಹೋದರಿಯರು ಆರೋಪಿಸಿದ್ದಾರೆ.
ಈ ಘಟನೆಗಳು ಇಮ್ರಾನ್ ಖಾನ್ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿವೆ. ಅವರ ಬೆಂಬಲಿಗರು ಮತ್ತು ಕುಟುಂಬದವರು ಅವರ ಭೇಟಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೈಲಿನೊಳಗೆ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ವದಂತಿಗಳು ಹರಡಿದ್ದರಿಂದಾಗಿ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿವೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಜೀರ್ಣೋದ್ಧಾರಕ್ಕೆ ಪಾಕಿಸ್ತಾನಕ್ಕೆ ಏಕೈಕ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಿಂದಲೇ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಭಾರತದ ವಿರುದ್ಧ ಪಾಕ್ ಗೆಲ್ಲಲು ಅನುಸರಿಸಬೇಕಾದ ತಂತ್ರವನ್ನು ವಿವರಿಸಿರುವ ಅವರು, ವ್ಯಂಗ್ಯಭರಿತವಾಗಿ ಪಾಕ್ ಸೇನಾಧ್ಯಕ್ಷ ಅಸೀಮ್ ಮುನೀರ್ ಮತ್ತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರನ್ನೇ ಆರಂಭಿಕ ಆಟಗಾರರಾಗಿ ಕಣಕ್ಕಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.
























