7 ಬಹುಮಹಡಿ ಕಟ್ಟಡಗಳಿಗೆ ವ್ಯಾಪಿಸಿದ ಬೆಂಕಿ; 279 ಮಂದಿ ನಾಪತ್ತೆ
ಹಾಂಕಾಂಗ್: ಹಾಂಗ್ಕಾಂಗ್ನ ತೈಪೊ ಜಿಲ್ಲೆಯಲ್ಲಿ ಹಲವು ಗಗನಚುಂಬಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 44 ಮಂದಿ ಸಜೀವ ದಹನವಾಗಿದ್ದು, 270ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಬೆಂಕಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಅನೇಕ ಗಗನಚುಂಬಿ ಕಟ್ಟಡಗಳಿರುವ ಬೃಹತ್ ವಸತಿ ಸಮುಚ್ಚಯದಲ್ಲಿ ಬುಧವಾರ ಈ ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ 7 ಗಗನಚುಂಬಿ ಕಟ್ಟಡಗಳು ಬೆಂಕಿಯಿಂದ ಸಂಪೂರ್ಣ ನಾಶವಾಗಿವೆ. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

ಬೆಂಕಿ ಇನ್ನೂ ಭುಗಿಲೇಳುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಕೆಲವು ಕಟ್ಟಡಗಳ ಒಳಗೆ ಹೋಗಲು ಸಾಧ್ಯವಾಗಿಲ್ಲ. ಹಾಂಕಾಂಗ್ ಇತಿಹಾಸದಲ್ಲೇ ಇದು ಭೀಕರ ಅಗ್ನಿ ಅವಘಡವಾಗಿದ್ದು, ಜನರನ್ನು ಆಘಾತಕ್ಕೆ ತಳ್ಳಿದೆ. ದುರಂತದಲ್ಲಿ 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿ 44 ಎಂದು ಪ್ರಕಟಿಸಲಾಗಿದೆ. 279 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ನರಹತ್ಯೆ ಸಂಶಯದಲ್ಲಿ ಬಂಧಿಸಲಾಗಿದೆ.
ಸುಮಾರು 2,000 ಅಪಾರ್ಟ್ಮೆಂಟ್ಗಳನ್ನ ಹೊಂದಿರುವ ಈ ಬೃಹತ್ ವಸತಿ ಸಮುಚ್ಚಯದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು. ಇದಕ್ಕಾಗಿ ಕಟ್ಟಡಗಳ ಹೊರಭಾಗದಲ್ಲಿ ಬಿದಿರಿನ ಅಟ್ಟಣಿಗೆ ರಚಿಸಲಾಗಿತ್ತು. ಈ ಬಿದಿರಿನ ರಚನೆಗಳಿಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಬಲವಾದ ಗಾಳಿ ಮತ್ತು ಉರಿಯುತ್ತಿದ್ದ ಅವಶೇಷಗಳು ತೂರಿಬಂದ ಪರಿಣಾಮ, ಪಕ್ಕದ 7 ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ.
ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಹಾಂಕಾಂಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನ್ ಲೀ ದೃಢಪಡಿಸಿದ್ದು, ಶೋಧ ತಂಡಗಳು ನಾಪತ್ತೆಯಾಗಿರುವ ನಿವಾಸಿಗಳನ್ನು ಹುಡುಕುತ್ತಿದ್ದಾರೆ. ಭಸ್ಮವಾದ ಕಟ್ಟಡಗಳಿಂದ ದಟ್ಟ ಹೊಗೆ ಇನ್ನೂ ಹೊರಸೂಸುತ್ತಿದೆ ಎಂದು ಹೇಳಿದ್ದಾರೆ. ಮಧ್ಯಾಹ್ನ 2.51ಕ್ಕೆ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ವಿಭಾಗಕ್ಕೆ ಮೊದಲ ಕರೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹತ್ತಾರು ಅಗ್ನಿಶಾಮಕ ಯಂತ್ರಗಳು, ಆ್ಯಂಬುಲೆನ್ಸ್ಗಳು ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಸುಮಾರು 2000 ಅಪಾರ್ಟ್ಮೆಂಟ್ಗಳ ನವೀಕರಣ ಕೆಲಸ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ವಿಕೋಪವನ್ನು ತ್ವರಿತವಾಗಿ ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ. ಬೆಂಕಿಯನ್ನು ನಂದಿಸಲು ಮತ್ತು ಮತ್ತಷ್ಟು ಜೀವಹಾನಿಯನ್ನು ಕನಿಷ್ಠಗೊಳಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುವಂತೆ ಅಧಿಕೃತ ಮಾಧ್ಯಮ ಕ್ಸಿ ವಿವರಿಸಿದೆ.
























