ಬೆಳಗಾವಿ: ಜನಿಸಿದ ಮಗು ಹೆಣ್ಣು ಎಂಬ ಕಾರಣಕ್ಕೆ ಅದರ ಕತ್ತು ಹಿಸುಕಿ ಹೆತ್ತ ತಾಯಿಯೇ ಹತ್ಯೆ ಮಾಡಿದ ಘಟನೆ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಅಶ್ವಿನಿ ಹಳಕಟ್ಟಿ ಎಂದು ಗುರುತಿಸಲಾಗಿದೆ. ಸುರೇಬಾನ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅಶ್ವಿನಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಅಶ್ವಿನಿಗೆ ನಾಲ್ಕನೇಯ ಮಗುವೂ ಹೆಣ್ಣಾಗಿದ್ದು, ಈ ಕಾರಣಕ್ಕಾಗಿ ಆ ಹಸುಗೂಸನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿದೆ. ಹತ್ಯೆ ಮಾಡಿದ ಬಳಿಕ ಮಗು ಉಸಿರಾಟ ನಿಲ್ಲಿಸಿದೆ ಎಂದು ನಾಟಕವಾಡಿರುವುದಾಗಿ ತಿಳಿದು ಬಂದಿದೆ.
ತಕ್ಷಣವೇ ರಾಮದುರ್ಗದ ಆಸ್ಪತ್ರೆಗೆ ಮಗುವನ್ನು ಕರೆತರಲಾಗಿದ್ದು, ಈ ವೇಳೆ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರ ವಶದಲ್ಲಿರುವ ಆರೋಪಿ ಅಶ್ವಿನಿ ಬಾಣಂತಿಯಾಗಿದ್ದು, ಆಕೆಗೆ ಪೊಲೀಸ್ ಕಾವಲಿನಲ್ಲಿ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ನೀಡಲಾಗುತ್ತಿದೆ.
























