ನಿರ್ಮಾಣ ಹಂತದಲ್ಲಿದ್ದ ಪಕ್ಕದ ಮನೆಯ ಕಾಂಪೌಂಡ್ ಕುಸಿತ
ಪುತ್ತೂರು : ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಧರೆ ಸಮೇತ ಕುಸಿದು ಬಿದ್ದ ಘಟನೆ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪ ಸುಭಾಶ್ ನಗರದಲ್ಲಿ ಸಂಭವಿಸಿದೆ. ನವೆಂಬರ್ 24ರಂದಷ್ಟೇ ಕುಟುಂಬವೊಂದು ಸುಭಾಷ್ ನಗರದ ಜನತಾ ಕಾಲೋನಿಯಲ್ಲಿರುವ ಈ ಮನೆಗೆ ಬಾಡಿಗೆಗೆ ಬಂದಿತ್ತು. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಜಬ್ಬಾರ್ ಎಂಬವರು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಮನೆಗೆ ಇಲ್ಯಾಸ್ ಕುಟುಂಬ ಸ್ಥಳಾಂತರಗೊಂಡಿತ್ತು. ಮುಂಜಾನೆ ಕುಟುಂಬ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತ್ತು. ಮನೆಯಲ್ಲಿ ಸಂಬಂಧಿಕರು ಒಟ್ಟುಗೂಡಿದ್ದರು. ಸಂಜೆ ಅಡುಗೆ ಕೋಣೆಯಲ್ಲಿ ಹಬ್ಬದಡುಗೆಯ ಸಿದ್ಧತೆಗಳು ನಡೆಯುತ್ತಿದ್ದವು.
ಬಾಡಿಗೆ ಮನೆಯ ಹಿಂದೆ ಎತ್ತರದ ಪ್ರದೇಶದಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಸುಶೀಲಾ ಎಂಬವರಿಗೆ ಸೇರಿದ ಮನೆ ಇದೆ. ಕಳೆದ 10 ದಿನಗಳಿಂದ ಅಲ್ಲಿ ಕಾಂಪೌಂಡ್ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ನವೆಂಬರ್ 24ರಂದು ಸಂಜೆ 5 ಗಂಟೆ ಸುಮಾರಿಗೆ ಗೋಡೆ ಕುಸಿಯುವ ಹಂತದಲ್ಲಿರುವುದನ್ನು ಮೇಸ್ತ್ರಿ ಗಮನಿಸಿದರು. ಅಪಾಯವನ್ನು ಅರಿತ ಅವರು, ಕೆಳಗಿದ್ದ ನಿವಾಸಿಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ಹೇಳಿದರು. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಹೊರಗೆ ಧಾವಿಸಿದ ಕೆಲವೇ ಕ್ಷಣಗಳಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಾಡಿಗೆ ಮನೆಯ ಮೇಲೆ ಬಿದ್ದಿದೆ.
ಅಡುಗೆ ಕೋಣೆ ಸಂಪೂರ್ಣವಾಗಿ ನಾಶವಾಗಿ ಮನೆಗೆ ಹಾನಿಯಾಗಿದೆ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಸ್ಟೌವ್ ಮತ್ತು ಪಾತ್ರೆಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಇಲ್ಯಾಸ್ ಕುಟುಂಬದ ಹೊರತಾಗಿ 7–8 ಮಕ್ಕಳು ಸೇರಿದಂತೆ ಹಲವಾರು ಸಂಬಂಧಿಕರು ಮನೆಯಲ್ಲಿದ್ದರು. ಅವರಲ್ಲಿ ಹಲವರು ಘಟನೆಯ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಊಟ ತಯಾರಿಸುತ್ತಿದ್ದರು.
























