ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಅರ್ಚಕನ ಬಂಧನ
ಮುಂಬೈ : ಮುಂಬೈಯ ಚೆಂಬೂರಿನಲ್ಲಿರುವ ಸಣ್ಣ ದೇವಸ್ಥಾನವೊಂದರಲ್ಲಿ ಕಾಳಿದೇವಿಯ ಪ್ರತಿಮೆಯನ್ನು ಮಾತೆ ಮೇರಿಯಂತೆ ಅಲಂಕರಿಸಿ ಭಕ್ತರ ಭಾವನೆಗೆ ಧಕ್ಕೆಯುಂಟುಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ದೇವಸ್ಥಾನದ ಅರ್ಚಕನನ್ನು ಬಂದಿಸಿದ್ದಾರೆ.
ಚೆಂಬೂರಿನ ಅನಿಕ್ ಎಂಬಲ್ಲಿರುವ ಸ್ಮಶಾನದೊಳಗಿರುವ ಕಾಳಿಕಾ ಮಾತೆಯ ಗುಡಿಯ ವಿಗ್ರಹವನ್ನು ರಾತ್ರೋರಾತ್ರಿ ಕ್ರೈಸ್ತರ ಮಾತೆಮೇರಿಯಂತೆ ಅಲಂಕರಿಸಲಾಗಿತ್ತು. ವಿಗ್ರಹಕ್ಕೆ ಹೊಂಬಣ್ಣದ ಸೀರೆ ಉಡಿಸಿ, ಶಿರದ ಬಳಿ ಶಿಲುಬೆ ಇರಿಸಿ ತೋಳಿನಲ್ಲಿ ಚಿಕ್ಕ ಮಗುವೊಂದನ್ನು ಇರಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ ಕಪ್ಪು ವಿಗ್ರಹಕ್ಕೆ ನಸುಕೆಂಪು ಬಣ್ಣವನ್ನೂ ಬಳಿಯಲಾಗಿತ್ತು. ಶನಿವಾರ ಬೆಳಗ್ಗೆ ಈ ಮಾರ್ಪಾಡು ಸ್ಥಳೀಯರ ಗಮನಕ್ಕೆ ಬಂದಿದ್ದು, ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಪೊಲೀಸರು ಬಂದು ದೇವಸ್ಥಾನದ ಅರ್ಚಕನನ್ನು ಬಂಧಿಸಿ ವಿಗ್ರಹದ ಅಲಂಕಾರಗಳನ್ನು ತೆಗೆದು ಯಥಾಸ್ಥಿತಿಗೆ ತಂದ ಬಳಿಕ ಪರಿಸ್ಥಿತಿ ಶಾಂತವಾಯಿತು. ತನಗೆ ಕನಸಿನಲ್ಲಿ ಬಂದು ಮಾತೆಮೇರಿ ಸೂಚನೆ ನೀಡಿದ್ದಾಳೆಂದು ಅರ್ಚಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ನ್ಯಾಯಾಲಯ ಅವನನ್ನು ಎರಡು ದಿನಗಳ ಮಟ್ಟಿಗೆ ಪೊಲೀಸರಿಗೊಪ್ಪಿಸಿದ್ದು, ಈ ಕೃತ್ಯದ ಹಿಂದಿನ ಉದ್ದೇಶ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಕ್ತರು ಇದನ್ನು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಕರೆದಿದ್ದಾರೆ. ಅನೇಕ ವರ್ಷಗಳಿಂದ ರುದ್ರಭೂಮಿಯೊಳಗೆ ಈ ಚಿಕ್ಕ ಗುಡಿಯಿತ್ತು. ರಾತ್ರಿ ಬೆಳಗಾಗುವದರೊಳಗೆ ಅರ್ಚಕ ಇಡೀ ಗುಡಿಯ ಸ್ವರೂಪವನ್ನೇ ಬದಲಿಸಿದ್ದ. ಇದು ಒಬ್ಬನಿಂದಾದ ಕೃತ್ಯವಲ್ಲ, ಬೇರೆ ಯಾರೋ ಇದರ ಹಿಂದೆ ಇದ್ದಾರೆ ಎಂದು ಸ್ಥಳೀಯ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.

























