ಉಡುಪಿ: ಪ್ರಧಾನಿ ಮೋದಿ ಸ್ವಾಗತಕ್ಕೆ ಭರದ ಸಿದ್ಧತೆ; ಬಿಗಿ ಭದ್ರತೆ ಏರ್ಪಾಡು

ಬನ್ನಂಜೆಯಿಂದ ಕಲ್ಸಂಕದವರೆಗೆ ರೋಡ್‌ ಶೋ ನಡೆಸಲು ವ್ಯವಸ್ಥೆ

ಉಡುಪಿ: ಶುಕ್ರವಾರ ಉಡುಪಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಪೂರ್ವಾಹ್ನ 11.40ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಉಡುಪಿ ಬನ್ನಂಜೆಯ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್‌ನಿಂದ ಪ್ರಾರಂಭಗೊಂಡು ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕಲ್ಸಂಕ ಜಂಕ್ಷನ್‌ವರೆಗೆ ಸಾಗಲಿದೆ. ಕಲ್ಸಂಕ ರಸ್ತೆಯಿಂದ ನೇರವಾಗಿ ಪಾರ್ಕಿಂಗ್ ಏರಿಯಾ-ರಥಬೀದಿ ಮೂಲಕ ಮಧ್ಯಾಹ್ನ 12ಕ್ಕೆ ಶ್ರೀ ಕೃಷ್ಣ ಮಠವನ್ನು ತಲುಪಿ, ಶ್ರೀ ಕೃಷ್ಣ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.

ಮೋದಿ ಸಾಮೂಹಿಕ ‘ಲಕ್ಷ ಕಂಠ ಗೀತಾ ಪಾರಾಯಣ’ದಲ್ಲಿ ಪಾಲ್ಗೊಂಡು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಮಧ್ಯಾಹ್ನ 1.35ಕ್ಕೆ ಸಮಾರಂಭದ ಸ್ಥಳದಿಂದ ಹೊರಟು 1.40ಕ್ಕೆ ಆದಿಉಡುಪಿ ಹೆಲಿಪ್ಯಾಡ್ ತಲುಪಿ 1.45ಕ್ಕೆ ಎಂಐ-17 ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ತೆರಳಿ, ಮಧ್ಯಾಹ್ನ 2.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಗೋವಾಕ್ಕೆ ಪ್ರಯಾಣ ಮಾಡಲಿದ್ದಾರೆ.





















































 
 

ಉಡುಪಿಗೆ ಆಗಮಿಸುತ್ತಿರುವ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲು ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ಅವರ ‘ರೋಡ್ ಶೋ’ ಮಾರ್ಗದ ಮೂರು ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷಧಾರಿಗಳ ಪ್ರದರ್ಶನ ಇತ್ಯಾದಿ ಇರಲಿವೆ. ರಸ್ತೆ ಮಾರ್ಗದ ಒಂದು ಕಡೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಆ ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರಕ್ಕೂ ಅಧಿಕ ಜನರು ನಿಂತು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ರೋಡ್ ಶೋ ವೀಕ್ಷಣೆ ಮಾಡುವ ಸಮಸ್ತ ನಾಗರಿಕರು ನ.28 ಶುಕ್ರವಾರ ಬೆಳಗ್ಗೆ 10.30ರೊಳಗೆ ಬನ್ನಂಜೆ-ಕಲ್ಸಂಕ ರಸ್ತೆಯ ಇಕ್ಕೆಲಗಳಲ್ಲಿ ಉಪಸ್ಥಿತರಿರುವಂತೆ ಕೋರಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ 1,112 ಮತಗಟ್ಟೆಗಳ ಪ್ರತಿ ಬೂತ್‌ನಿಂದ ತಲಾ 12 ಮಂದಿಯ ತಂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಆದೇಶಿಸಿದೆ. ಉಡುಪಿ ನಗರ ಭಾಗದಿಂದ ಗರಿಷ್ಠ ಸಂಖ್ಯೆಯ ಜನತೆ ಭಾಗವಹಿಸಲಿದ್ದಾರೆ. 2018ರ ಬಳಿಕ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ನೋಡುವ ಸದವಕಾಶ ಜಿಲ್ಲೆಯ ಜನತೆಗೆ ಲಭಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಕ್ಯಾ.ಬ್ರಿಜೇಶ್ ಚೌಟ ಸಹಿತ ಜಿಲ್ಲೆಯ ಶಾಸಕರು, ರಾಜ್ಯದ ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು, ಮೋದಿ ಅಭಿಮಾನಿಗಳ ಸಹಿತ ಜಿಲ್ಲೆಯ ಜನತೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶ್ವ ನಾಯಕ, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ವಿನಂತಿಸಿದ್ದಾರೆ.

ಮೋದಿ ಭೇಟಿಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ಪ್ರಧಾನಿಗಳ ಸಂಚಾರ ಮತ್ತು ಭೇಟಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಇರುವ ಅಂಗಡಿಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ. ಇದೇ ರೀತಿ ಪ್ರಧಾನಿ ಸಂಚರಿಸುವ ಮಾರ್ಗದ ಎರಡೂ ಬದಿಯಲ್ಲಿರುವ ಅಂಗಡಿಗಳನ್ನೂ ನವೆಂಬರ್ 28ರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಡಳಿತ ನಿರ್ದೇಶಿಸಿದೆ.

ನವೆಂಬರ್ 26 ಬೆಳಗ್ಗೆ 6 ಗಂಟೆಯಿಂದ ನವೆಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಫ್ಲೈ ಜೋನ್’ ಎಂದು ಘೋಷಿಸಲಾಗಿದೆ.

ಪ್ರಧಾನಿಯ ವೀಕ್ಷಣೆಗೆ ಬರುವ ಸಾರ್ವಜನಿಕರು ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್, ಬಲೂನು, ಪಟಾಕಿ, ಲೂಸ್ ಪಾಲಿಥಿನ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

error: Content is protected !!
Scroll to Top