ಉಡುಪಿ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ಮೊದಲ ಮಹಡಿಯಲ್ಲಿನ ಶ್ರೀ ರಾಮ ದರ್ಬಾರ್‌ನಲ್ಲಿರುವ ರಾಮ ಪಟ್ಟಾಭಿಷೇಕದ ಶ್ರೀ ರಾಮ, ಲಕ್ಷ್ಮಣ, ಸೀತೆ, ಭರತ, ಶತ್ರುಘ್ನ ಮತ್ತು ಆಂಜನೇಯ ವಿಗ್ರಹಗಳಿಗೆ ಸ್ವರ್ಣಾಭರಣಗಳನ್ನು ಉಡುಪಿಯಿಂದ ಸಿದ್ಧಪಡಿಸಿ ಅರ್ಪಣೆ ಮಾಡಲಾಗಿದೆ.
ಟ್ರಸ್ಟ್‌ನ ಮನವಿಯಂತೆ ಉಡುಪಿಯ ಸ್ವರ್ಣ ಜ್ಯುವೆಲ್ಲರ್ಸ್‌ನವರು ಕೇವಲ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ನಿರ್ಮಿಸಿ ಅರ್ಪಣೆ ಮಾಡಿದ್ದಾರೆ. ಗುಜ್ಜಾಡಿಯ ದೀಪಕ್ ಮತ್ತು ಇತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಪರಿವಾರ ಸಮೇತ ಶ್ರೀ ರಾಮನಿಗಾಗಿ ಸಮರ್ಪಿಸಿ ಬಂದಿದ್ದಾರೆ.
ಈ ಕುರಿತು ಸಂಸ್ಥೆಞ ಗುಜ್ಜಾಡಿ ರಾಮದಾಸ್ ನಾಯಕ್ ಅವರು ಸಂತಸ ವ್ಯಕ್ತಪಡಿಸಿದ್ದು, ಇದು ನಮಗೆ ದೊರೆತ ಅಪೂರ್ವ ಅವಕಾಶ. ಅಯೋಧ್ಯಾ ಮಂದಿರ ಪೂರ್ಣಗೊಂಡು ಪ್ರಧಾನಿ ಮೋದಿ ಅವರು ಭಗವಾಧ್ವಜಾರೋಹಣ ಮಾಡುವ ಹೊತ್ತಲ್ಲೇ ಈ ಆಭರಣಗಳನ್ನು ಮಾಡುವ, ಸಮರ್ಪಿಸುವ ಅವಕಾಶ ನಮಗೆ ದೊರೆತಿದ್ದು ಪೂರ್ವಜರು ಮಾಡಿದ ಪುಣ್ಯ. ನಮ್ಮ ಸ್ವರ್ಣ ಕುಟುಂಬಕ್ಕೆ ಇದೊಂದು ಶಾಶ್ವತ ಸ್ಮರಣೀಯ ಘಳಿಗೆ ಎಂದಿದ್ದಾರೆ.
ಇದಕ್ಕೂ ಮೊದಲು ಕಾಶಿ ಮಠಾಧೀಶರ ಆದೇಶದಂತೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ, ಸ್ವರ್ಣ ಅಟ್ಟೆ ಪ್ರಭಾವಳಿ ಕಂಠಿಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ದೊರೆತಿತ್ತು ಎಂಬುದನ್ನು ಅವರು ಈ ವೇಳೆ ಸ್ಮರಿಸಿಕೊಂಡಿದ್ದಾರೆ.
ಶ್ರೀರಾಮ ಮತ್ತು ಪರಿವಾರದ ನೂತನ ಆಭರಣಗಳಲ್ಲಿ ಕಿರೀಟ, ಕರ್ಣ ಕುಂಡಲ, ತಿಲಕ, ಸಣ್ಣ ಮತ್ತು ಉದ್ದ ಹಾರಗಳು, ತೋಳಟ್ಟಿ / ತೋಳ್ಕೊಂಧಿ, ಕಡ/ಕಂಕಣ, ನೂಪರ (ಕಾಲಿನ ಗೆಜ್ಜೆ) ಇತ್ಯಾದಿ ಸೇರಿವೆ. ಎಲ್ಲಾ ಆಭರಣಗಳನ್ನು ಶ್ರೀ ರಾಮ ದೇವಾಲಯ ಟ್ರಸ್ಟ್ ನೀಡಿದ ಮಾರ್ಗಸೂಚಿ ಪ್ರಕಾರ ತಯಾರಿಸಲಾಗಿದೆ. ಈ ಆದೇಶ ದೃಢೀಕರಣ ಪತ್ರವನ್ನು ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರು ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ಪ್ರೈವೆಟ್ ಲಿಮಿಟೆಡ್‌ನ ಸಿಒಒ ದೀಪಕ್ ರಾಮದಾಸ್ ನಾಯಕ್ ಅವರಿಗೆ ನೀಡಿದ್ದಾರೆ.
























