9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ
ಬೆಂಗಳೂರು : ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಗರಿಷ್ಠ ವೇಗದ ಮಿತಿ ನಿಗದಿಪಡಿಸುವ ಹಾಗೂ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕೇಂದ್ರ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸರು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಮಕ್ಕಳೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲು ಮುಂದಾಗಿದ್ದಾರೆ.
ಮುಂದಿನ ಆರು ತಿಂಗಳ ಒಳಗಾಗಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿಯಮಗಳನ್ನು ಪರಿಷ್ಕೃತಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತಾಗಿ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದು, 9 ತಿಂಗಳಿನಿಂದ 4 ವರ್ಷದ ವಯೋಮಾನದ ಮಕ್ಕಳು ಕೂಡ ಹೆಲ್ಮೆಟ್ ಧರಿಸುವುದು ಅನಿವಾರ್ಯ. ಎಲ್ಲರ ಜೀವವೂ ಅತ್ಯಮೂಲ್ಯ. ಅಪಘಾತ ಯಾವಾಗ ಬೇಕಿದ್ದರೂ ಸಂಭವಿಸಬಹುದು, ಹೀಗಾಗಿ ನಿರ್ಲಕ್ಷ್ಯ ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆರಂಭದಲ್ಲಿ ಬೆಂಗಳೂರಿನಲ್ಲಿ ನಿಯಮ ಜಾರಿಗೊಳಿಸಿ ಬಳಿಕ ರಾಜ್ಯವ್ಯಾಪಿ ವಿಸ್ತರಿಸಲು ಚಿಂತನೆ ನಡೆದಿದೆ.
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹೆಲ್ಮೆಟ್ಗಳು ಲಭ್ಯವಿದ್ದು, ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಗ್ರಾಹಕರ ಕೈಗೆಟುಕುತ್ತಿವೆ. ಆದರೂ ಜನರು ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಅನಾಹುತಗಳಿಗೆ ಮುನ್ನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಹಲವು ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ‘ಒಂದು ದಿನ ಪೊಲೀಸ್ ಆಗಿ’ ಎಂಬ ಉಪಕ್ರಮವನ್ನು ಇತ್ತೀಚೆಗಷ್ಟೇ ಹಮ್ಮಿಕೊಂಡಿದ್ದು, ಟ್ರಾಫಿಕ್ ಪೊಲೀಸರ ಕಷ್ಟ ಏನೆಂಬುದರ ಬಗ್ಗೆ ಸಾಮಾನ್ಯರಿಗೂ ಅರಿವು ಮೂಡಿಸಿ ಆ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆ ತಡೆಯಲು ಪ್ರಯತ್ನಿಸಲಾಗುತ್ತಿದೆ.
‘ಟ್ರಾಫಿಕ್ ಬ್ಯಾರಿಕೇಡ್‌ನ ಇನ್ನೊಂದು ಬದಿಯಲ್ಲಿ ನಿಂತರೆ ಹೇಗಿರುತ್ತದೆ ಅಂತ ಎಂದಾದರೂ ಯೋಚಿಸಿದ್ದೀರಾ?’ ‘ಒಂದು ದಿನ ಪೊಲೀಸ್ ಆಗಿ’ ಎನ್ನುವ ಉಪಕ್ರಮವನ್ನು ನೀವೂ ಅನುಭವಿಸಿ, ಸರ್ಟಿಫಿಕೇಟ್ ಗಳಿಸಿ! ಈಗಲೇ BTP ASTraM ಆಪ್‌ನಲ್ಲಿ ನೋಂದಣಿ ಮಾಡಿ’ ಎಂದು ಕೆಲವು ದಿನಗಳ ಹಿಂದೆ ಬೆಂಗಳೂರು ಸಂಚಾರ ಪೊಲೀಸರು ಎಕ್ಸ್ ಮೂಲಕ ಮನವಿ ಮಾಡಿದ್ದರು.
























