ಪುರುಷೋತ್ತಮ ಬಿಳಿಮಲೆ ಮೂಲಕ ಕಾಂಗ್ರೆಸ್ ಷಡ್ಯಂತ್ರ ಎಂದು ಆರೋಪ
ಮಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರ ಕುರಿತು ನೀಡಿರುವ ಅವಮಾನಕಾರಿ ಹೇಳಿಕೆ ಉದ್ದೇಶಪೂರ್ವಕ. ಹಿಂದೂ ಸಂಪ್ರದಾಯಯ ಆಚಾರ, ವಿಚಾರಗಳಿಗೆ ಧಕ್ಕೆ ತರುವ ಕೆಲಸ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ. ಯಕ್ಷಗಾನವನ್ನು ದೈವಿಕ ಕಲೆಯನ್ನಾಗಿ ಆಚರಿಸುವವರು ನಾವುಗಳು. ಯಕ್ಷಗಾನದಲ್ಲಿ ದೇವರ ವೇಷ ಹಾಕಿದ ಕಲಾವಿದರನ್ನು ಕಂಡಾಗ ಕೈಮುಗಿಯುವವರು ನಾವು. ಬಹಳ ಶ್ರದ್ದಾ , ನಿಷ್ಠೆಯಿದಿಂದ ಆಚರಿಸುವ ಯಕ್ಷಗಾನ ಕಲೆಯನ್ನು, ಕಲಾವಿದರ ಭಾವನೆಗೆ ಪುರುಷೋತ್ತಮ ಬಿಳಿಮಲೆಯವರು ಅವಮಾನಿಸಿದ್ದಾರೆ ಎಂದು ಶಾಸಕ ವೈ ಭರತ್ ಶೆಟ್ಟಿ ಹೇಳಿದ್ದಾರೆ.
ಬಿಳಿಮಲೆಯವರಿಗೆ ಯಕ್ಷಗಾನ ಸ್ತ್ರೀ ವೇಷಧಾರಿಗಳನ್ನು ನೋಡಿದಾಗ ಕ್ರಶ್ ಆಗುತ್ತಿತೆಂದು ಅವರು ಹೇಳಿದ್ದಾರೆ. ಅವರ ವೈಯುಕ್ತಿಕ ವಿಚಾರವನ್ನು ನಾನು ಈ ಕ್ಷಣ ಹೇಳುವುದಿಲ್ಲ ಆದರೆ ಯಕ್ಷಗಾನ ಕಲಾವಿದರನ್ನು ಬೊಟ್ಟುಮಾಡಿ ಆ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಬೇಕಂತಲೇ ಷಡ್ಯಂತ್ರ ರಚಿಸಿ ಈ ವಿಷಯ ದೊಡ್ಡದಾದ ಚರ್ಚೆ ಆಗಬೇಕೆಂದು ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕರಾವಳಿಯಲ್ಲಿ ಉಳಿದ ಪಕ್ಷದ ಕಲಾಭಿಮಾನಿಗಳು ಯಕ್ಷಗಾನ ಮೇಳಗಳ ಪ್ರದರ್ಶನ ಮಾಡಿಸುತ್ತಾರೆ. ಆದರೆ ಅವರು ಯಾರು ಇದರ ವಿರುದ್ಧವಾಗಿ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು. ಯಕ್ಷಗಾನ ಪ್ರದರ್ಶನವನ್ನು ಕಾಂಗ್ರೆಸ್ ನಾಯಕರು ಮಾಡಿಸುತ್ತಾರೆ ಆದರೆ ಈ ಕುರಿತು ಯಾಕೆ ಅವರು ಮೌನ ವಹಿಸಿದ್ದಾರೆ? ರಾಜ್ಯ ಸರ್ಕಾರ ಪುರುಷೋತ್ತಮ ಬಿಳಿಮಲೆಯವರನ್ನು ಕೂಡಲೇ ಅಧಿಕಾರ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಆಗ್ರಹಿಸಿದ್ದಾರೆ.
ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ, ಯಕ್ಷಗಾನ ಕಲಾವಿದರನ್ನು ಪುರುಷೋತ್ತಮ ಬಿಳಿಮಲೆಯವರು ನೋಯಿಸಿದ್ದಾರೆ. ಈ ರೀತಿಯ ಮಾತುಗಳನ್ನು ಆಡಿ ಇಲ್ಲಿನ ಕಲಾ ವಲಯಕ್ಕೆ ಬಾಂಬ್ ಹಾಕಿದ್ದಾರೆ. ಅದು ಇಂದು ಸಿಡಿದು ಕಲಾವಿದರ ನೈತಿಕ ಸ್ಟೈರ್ಯವನ್ನು ಕುಗ್ಗಿಸಿ ಮನಸಿಗೆ ಘಾಸಿ ಉಂಟುಮಾಡಿದೆ. ಅವರ ಹೇಳಿಕೆ ಮುಂದೊಂದು ದಿನ ಅವರ ಅಧಿಕಾರದಿಂದ ಕೆಳಗಿಳಿಸಲುಬಹುದು. ಅವರು ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಬೇಕೆಂದು ಆಗ್ರಹಿಸಿದರು.
























