ಕಾಂಗ್ರೆಸ್ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ
ಬೆಂಗಳೂರು : ರಾಜ್ಯ ಕಾಂಗ್ರೆಸ್ನ ಒಳ ಜಗಳ ಕ್ಲೈಮಾಕ್ಸ್ ಹಂತ ತಲುಪಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಿರಂಗವಾಗಿ ಒಬ್ಬರೊಗೊಬ್ಬರು ತಂತ್ರ-ಪ್ರತಿತಂತ್ರ ಹೆಣೆಯತೊಗಿದ್ದಾರೆ. ಈ ನಾಯಕತ್ವ ಬದಲಾವಣೆ ಜಗಳ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದ್ದು, ಬಗೆಹರಿಸಲು ದಾರಿ ಕಾಣದೆ ಅಸಹಾಯಕವಾಗಿ ಕುಳಿತಿದೆ. ಇಷ್ಟು ದಿನ ತೆರೆಮರೆಯಲ್ಲಿ ನಡೆದಿದ್ದ ಗದ್ದುಗೆ ಗುದ್ದಾಟ ತೀವ್ರಗೊಂಡಿದೆ. ಆಡಳಿತ ಪಕ್ಷದ ಮೂಲಗಳ ಪ್ರಕಾರ ಸಿಎಂ ಆಪ್ತ ಬಳಗ ಸಿದ್ದರಾಮಯ್ಯನವರ ಮುಂದುವರಿಕೆಗೆ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಡಿಸಿಎಂ ಪರ ತಂಡ ಕೂಡ ಇದೇ ಪ್ರಯತ್ನವನ್ನು ಚುರುಕುಗೊಳಿಸಿದೆ.
ಡಿ.ಕೆ ಶಿವಕುಮಾರ್ ಬೆಂಬಲಿಗ ಶಾಸಕರು ಮತ್ತು ಸಚಿವರು ದೆಹಲಿಗೆ ತೆರಳಿದ ಬೆನ್ನಲ್ಲೇ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಚಟುವಟಿಕೆಗಳು ತೀವ್ರಗೊಂಡಿದೆ. ಈ ಬೆನ್ನಲ್ಲೇ ಹೈಕಮಾಂಡ್ ಸಂಪರ್ಕಿಸಿರುವ ಸಿದ್ದರಾಮಯ್ಯ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವಂತೆ ಮನವಿ ಮಾಡಿದ್ದಾರೆ. ದೂರವಾಣಿ ಮೂಲಕ ಪಕ್ಷದ ವರಿಷ್ಠರನ್ನು ಸಂಪರ್ಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೊಂದಲ ನಿವಾರಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಜೈಲಿನಲ್ಲಿರುವ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರೊಂದಿಗೆ ಚರ್ಚೆ ನಡೆಸಲು ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಇನ್ನು ಸಿಎಂ-ಡಿಸಿಎಂ ಬೆಂಬಲಿಗರ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸಿದ್ದು, ಪಕ್ಷದ ಶಾಸಕರು ಮತ್ತು ನಾಯಕರಿಗೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಬಹುಚರ್ಚಿತ ‘ಪವರ್ ಶೇರಿಂಗ್’ ಗೊಂದಲ ಹೈಕಮಾಂಡ್ ಮಧ್ಯಪ್ರವೇಶಿಸಿ ಸ್ಪಷ್ಟ ತೀರ್ಮಾನ ಪ್ರಕಟಿಸದ ಹೊರತು ಮುಗಿಯುವುದಿಲ್ಲ ಎಂಬುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ ನಾಯಕತ್ವದ ಸರಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆ ಶುರುವಾದ ತಂತ್ರ ಮತ್ತು ಪ್ರತಿತಂತ್ರದ ಆಟದಿಂದಾಗಿ ಗೊಂದಲ ಹೆಚ್ಚಿದ್ದು, ಸರ್ಕಾರದೊಳಗೆ ಸಿಎಂ ಆಪ್ತ ಬಳಗ, ಡಿಸಿಎಂ ಕ್ಲೋಸ್ ಟೀಂ ಎಂಬ ಎರಡು ಬಣ ಸ್ಪಷ್ಟ ರೂಪ ಪಡೆದುಕೊಂಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ಗೆ ಅವಕಾಶಕ್ಕಾಗಿ ಅವರ ಆಪ್ತರ ತಂಡ ದಿಲ್ಲಿ ಹೈಕಮಾಂಡ್ ಅಂಗಳದಲ್ಲಿ ದನಿ ಎತ್ತಿದ ಬೆನ್ನಲ್ಲೇ, ಐದೂ ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯನವರು ಖಡಕ್ಕಾಗಿ ಹೇಳಿದ್ದಾರೆ. ಇಷ್ಟು ದಿನ ಇಂತಹ ಹೇಳಿಕೆಗಳಿಗೆ ಸೌಮ್ಯ ಧಾಟಿಯಲ್ಲೇ ಪ್ರತಿಕ್ರಿಯಿಸುತ್ತಿದ್ದ ಡಿ.ಕೆ. ಶಿವಕುಮಾರ್ ಸಿಟ್ಟಿನ ಮುಖಭಾವದಲ್ಲಿ ‘ಐ ವಿಶ್ ಹಿಮ್ ಆಲ್ ದಿ ವೆರಿ ಬೆಸ್ಟ್’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದು, ವರಿಷ್ಠ ನಾಯಕರ ನಿರ್ಣಯದ ಹೊರತಾಗಿ ಬಿಕ್ಕಟ್ಟು ಕೊನೆಯಾಗುವುದಿಲ್ಲ ಎಂಬ ವಾತಾವರಣ ಸೃಷ್ಟಿಯಾದಂತಿದೆ.
ಈ ಮಧ್ಯೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದು, ಅವರ ಭೇಟಿಗೆ ಸಿಎಂ, ಡಿಸಿಎಂ ಬಣಗಳೆರಡೂ ಮುಂದಾಗಿವೆ. ಇದರ ಹೊರತಾಗಿ, ಸಿದ್ದರಾಮಯ್ಯನವರು ಶನಿವಾರ ಭೇಟಿಗೆ ಖರ್ಗೆ ಅವರ ಸಮಯಾವಕಾಶ ಕೇಳಿದ್ದಾರೆ. ಸಿದ್ದರಾಮಯ್ಯ ಮಾತಿಗೆ ತಪ್ಪುವುದಿಲ್ಲ ಎಂದು ಡಿ.ಕೆ. ಸುರೇಶ್ ಹೇಳಿಕೆ ಬೆನ್ನಲ್ಲೇ ಅವಕಾಶಕ್ಕಾಗಿ ಡಿ.ಕೆ. ಶಿವಕುಮಾರ್ ಆಪ್ತರ ತಂಡ ಅಂಜಿಕೆ ತೊರೆದು ಅಖಾಡಕ್ಕಿಳಿದರೆ, ಸಿಎಂ ಆಪ್ತರು ಸಹ ತಂತ್ರಗಾರಿಕೆ ಚುರುಕುಗೊಳಿಸಿದ್ದಾರೆ.
ಗುರುವಾರ ರಾತ್ರಿ ಮೈಸೂರಿನಿಂದ ಮರಳಿದ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ತಡರಾತ್ರಿವರೆಗೆ ನಡೆದ ಡಿನ್ನರ್ ಮೀಟಿಂಗ್ನಲ್ಲಿ ತಂತ್ರಗಾರಿಕೆ ಹೆಣೆಯಲಾಗಿದೆ. ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಹಲವು ಹಿರಿಯ ಸಚಿವರು ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದು, ಸುಸೂತ್ರವಾಗಿ ಸಾಗಿರುವ ಸಿದ್ದರಾಮಯ್ಯ ನಾಯಕತ್ವದ ಸರ್ಕಾರದ ಸ್ಥಿರತೆ ದೃಷ್ಟಿಯಿಂದ ಗೊಂದಲಕ್ಕೆ ತೆರೆ ಎಳೆಯಿರಿ ಎಂದು ಹೈಕಮಾಂಡ್ ನಾಯಕರಿಗೆ ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರ ಸಹಿ ಸಹಿತ ಅಭಿಪ್ರಾಯ ಪತ್ರವನ್ನೂ ವರಿಷ್ಠರ ಕೈಗಿಡಲು ತಯಾರಿಯಾಗಿದೆ. ಅದಕ್ಕಾಗಿ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಭೇಟಿಗೆ ಸಮಯಾವಕಾಶ ಪಡೆಯುವ ಜವಾಬ್ದಾರಿಯನ್ನು ಹಿರಿಯ ಸಚಿವರೊಬ್ಬರಿಗೆ ನೀಡಲಾಗಿದೆ. ಸಿಎಂ ಆಪ್ತ ಬಣದ ಈ ತಂತ್ರಗಾರಿಕೆಗೆ ಪ್ರತಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಬಳಗವೂ ಸದ್ದಿಲ್ಲದೆ ಪ್ರತಿತಂತ್ರ ಹೂಡಿದೆ.
























