ಮಂಗಳೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮೂಡಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅದ್ಯಪಾಡಿ ಅಲಿಯಾಸ್ ಮೊಹಮ್ಮದ್ ಮನ್ಸೂರ್ ವಿರುದ್ಧ ಮಾತ್ರ ಈಗಾಗಲೇ 29ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿದೆ.
ಮೂಡಬಿದಿರೆ ತಾಲೂಕು ಹೊಸ್ಮಾರು – ನೆಲ್ಲಿಕಾರು ರಸ್ತೆಯಲ್ಲಿ ಟಾಟಾ ಎಸಿ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತುತು. ತಕ್ಷಣ ದಾಳಿ ನಡೆಸಿ ಆರೋಪಿಗಳಾದ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವದ್, ಅಬ್ದುಲ್ ಮೊಹಮ್ಮದ್ ನಿಶಾಮ್ ಎಂಬ ಮೂವರನ್ನು ವಶಕ್ಕೆ ಪಡೆಯಲಾಗಿದೆ. ವಾಹನದಲ್ಲಿ ಒಟ್ಟು 3 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 178/2025 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
1ನೇ ಆರೋಪಿ ಮನ್ಸೂರ್ ಅದ್ಯಪಾಡಿ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 29 ಪ್ರಕರಣಗಳ ನಂತರ ಇದು 30ನೇ ಪ್ರಕರಣವಾಗಿದ್ದು, 2ನೇ ಆರೋಪಿ ಮೊಹಮ್ಮದ್ ಅಶ್ವದ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ 1 ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿದೆ ಹಾಗೂ 3ನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ವಿರುದ್ಧ ಇದು ಮೊದಲ ಪ್ರಕರಣವಾಗಿದೆ. ಆರೋಪಿಗಳ ಮೇಲೆ ಸಂಘಟಿತ ಅಪರಾಧ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಚಾರಣೆಯ ನಂತರ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
























