ಮುಂಜಾನೆ 3 ಗಂಟೆಗೆ ತೆರೆದ ದೇಗುಲದ ಬಾಗಿಲು, ಸಾವಿರಾರು ಭಕ್ತರಿಂದ ಅಯ್ಯಪ್ಪ ದರ್ಶನ
ಶಬರಿಮಲೆ : ಈ ವರ್ಷದ ಮಂಡಲ ಮತ್ತು ಮಕರ ವಿಳಕ್ಕು ಯಾತ್ರಾ ಋತುವಿಗಾಗಿ ಶಬರಿಮಲೆ ದೇಗುಲದ ಬಾಗಿಲು ಇಂದು ತೆರೆದಿದೆ. ಅಯ್ಯಪ್ಪ ದೇಗುಲದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಇಂದಿನಿಂದ ಆರಂಭವಾಗಿದ್ದು, ಇಂದು ನಸುಕಿನ 3 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗಿದೆ. ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ.
ಮೇಲ್‌ಶಾಂತಿ ಅರುಣ್‌ಕುಮಾರ್ ನಂಬೂದಿರಿಯವರು ಇಂದು ನಸುಕಿನ 3 ಗಂಟೆಗೆ ತಂತ್ರಿ ಮಹೇಶ್ ಮೋಹನಾರು ಮತ್ತು ತಿರುವಾಂಕೂರು ದೇವಸ್ವಂ ಬೋರ್ಡ್ ಅಧಿಅಕರಿಗಳ ಸಮ್ಮುಖದಲ್ಲಿ ದೇಗುಲದ ಬಾಗಿಲನ್ನು ತೆರೆದಾಗ ಕಾದು ನಿಂತಿದ್ದ ಸಾವಿರಾರು ಅಯ್ಯಪ್ಪ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ ಘೋಷಣೆ ಕೂಗಿ ಭಕ್ತಿಪರವಶರಾದರು.
ನಿತ್ಯ 80ರಿಂದ 90 ಸಾವಿರ ಆನ್‌ಲೈನ್ ಬುಕ್ಕಿಂಗ್ ಭಕ್ತರು ಮತ್ತು ಸುಮಾರು 20 ಸಾವಿರದಷ್ಟು ಸ್ಪಾಟ್ ಬುಕ್ಕಿಂಗ್ ಭಕ್ತರಿಗೆ ಅಯ್ಯಪ್ಪನ ದರ್ಶನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದಷ್ಟು ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡು ಬರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂಜಾನೆ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪ್ರತಿದಿನ ಗರ್ಭಗುಡಿ ತೆರೆದಿರುತ್ತದೆ.
ಕೇರಳದಲ್ಲಿ ಕಳೆದ ಕೆಲವು ತಿಂಗಳಿಂದ ಮಿದುಳನ್ನು ಬಾಧಿಸುವ ಅಮಿಬಾ ರೋಗದ ಹಾವಳಿ ತೀವ್ರಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅಯ್ಯಪ್ಪ ವ್ರತಧಾರಿಗಳಿಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸೂಚಿಸಲಾಗಿದೆ.
ಕೇರಳ ಆರೋಗ್ಯ ಇಲಾಖೆ ಭಕ್ತರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನದಿಯಲ್ಲಿ ತೀರ್ಥಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಲು, ಕುಡಿಯಲು ಬಿಸಿ ನೀರು ಬಳಸಲು, ಆಗಾಗ ಕೈಗಳನ್ನು ನೀರಿನಿಂದ ತೊಳೆದುಕೊಳ್ಳುವಂತೆ ಮತ್ತು ತೊಳೆದ ಹಣ್ಣುಗಳನ್ನು ಸೇವಿಸಲು ಸೂಚಿಸಲಾಗಿದೆ. ಅಲ್ಲದೆ ಬೆಟ್ಟ ಹತ್ತುವಾಗ ಆಗಾಗ ವಿಶ್ರಾಂತಿ ಪಡೆಯುವಂತೆ ಮತ್ತು ಶೌಚಾಲಯಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ.
ಭಕ್ತರಿಗೆ ದೇವಸ್ವಂ ಬೋರ್ಡ್ ಇನ್ನಷ್ಟು ಸೌಲಭ್ಯ ಒದಗಿಸಿದೆ. ಮಲೆಯೇರುವ ದಾರಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರಿನ ವ್ಯವಸ್ಥೆ, ವಿಶ್ರಾಂತಿಗೆ ಪ್ರತ್ಯೇಕ ಸ್ಥಳ, ಪಾರ್ಕಿಂಗ್‌ಗಾಗಿ ವ್ಯವಸ್ಥೆ, ಸಾರಿಗೆ ಸೌಲಭ್ಯ ಮಾಡಲಾಗಿದೆ. ಬಯೋ ಶೌಚಾಲಯದಂಥ ಅಧುನಿಕ ವ್ಯಸ್ಥೆಗಳನ್ನು ಮಾಡಲಾಗಿದೆ.
























